×
Ad

ಬೆಂಗಳೂರಿನಲ್ಲಿ ಮುಂದುವರಿದ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಸಂಚಾರ ಅಸ್ತವ್ಯಸ್ತ

Update: 2021-10-15 21:58 IST

ಬೆಂಗಳೂರು, ಅ.15: ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಹಲವು ರಸ್ತೆಗಳು, ಬಡಾವಣೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ನಗರದ ಹಲವೆಡೆ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪ್ರಮುಖವಾಗಿ ರಾಜರಾಜೇಶ್ವರಿ ನಗರದ ಜನಪ್ರಿಯ ಲೇಔಟ್ ಹಾಗೂ ಬೊಮ್ಮನಹಳ್ಳಿ, ಕೋಡಿ ಚಿಕ್ಕನಹಳ್ಳಿಯಲ್ಲಿ ರಸ್ತೆಗಳು ಕೆರೆಯಂತಾಗಿವೆ. 

ರಾಜಾಜಿನಗರ, ನವರಂಗ್, ರಿಚ್ ಮಂಡ್ ಸರ್ಕಲ್, ಮಹಾಲಕ್ಷ್ಮೀ ಲೇಔಟ್, ಲಕ್ಷ್ಮೀನಾರಾಯಣಪುರ, ಬಸವೇಶ್ವರನಗರ, ಗಾಯತ್ರಿ ನಗರ, ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಪೀಣ್ಯ, ಗುಂಡಪ್ಪ ಲೇಔಟ್, ಬಿಟಿಎಂ ಲೇಔಟ್, ಚೊಕ್ಕಸಂದ್ರದಲ್ಲಿನ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಇಲ್ಲಿನ ಮಲ್ಲೇಶ್ವರಂ ಗಾಯತ್ರಿ ನಗರದಲ್ಲಿ ಚಂದ್ರಶೇಖರ್ ಎಂಬುವರ ಮನೆಗೆ ಚರಂಡಿ ನೀರು ನುಗ್ಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ನೀರನ್ನು ಹೊರತೆಗೆದರು. ಅದೇ ರೀತಿಯಲ್ಲಿ, ದಾಸರಹಳ್ಳಿಯ ಭಾಗದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿತ್ತು. 

ಮಳೆ ಅನಾಹುತ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿವೊಬ್ಬರು, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ, ದಕ್ಷಿಣ ವಲಯ, ಪೂರ್ವ ವಲಯ ಭಾಗಗಳಲ್ಲಿ ಮಳೆಯಿಂದಾಗಿ ಯಾವುದೇ ಹಾನಿಯಾಗಿಲ್ಲ. ಇನ್ನುಳಿದ ಕಡೆಗಳಲ್ಲಿ ಸಮಸ್ಯೆ ಉಲ್ಬಣಗೊಂಡಿದ್ದು, ಶೀಘ್ರದಲ್ಲೇ ನೀರು, ತ್ಯಾಜ್ಯ ಸ್ವಚ್ಛಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News