ಬೆಂಗಳೂರಿನಲ್ಲಿ ವಾಲಿದ ಸರಕಾರಿ ಕಟ್ಟಡ: ಸ್ಥಳೀಯರಲ್ಲಿ ಆತಂಕ

Update: 2021-10-16 12:59 GMT

ಬೆಂಗಳೂರು, ಅ.16: ಬೆಂಗಳೂರಿನಲ್ಲಿ ದಿನೆ ದಿನೆ ಕಟ್ಟಡ ನೆಲಕ್ಕುರಳುವ ಘಟನೆಗಳು ದ್ವಿಗುಣಗೊಳ್ಳುತ್ತಿದ್ದು, ಇದೀಗ ಮತ್ತೆರಡು ಸರಕಾರಿ ಕಟ್ಟಡ ವಾಲಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಬಿನ್ನಿಪೇಟೆ ಸಮೀಪ ಪೊಲೀಸರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚಯದ ಒಂದು ಕಟ್ಟಡ ವಾಲಿರುವುದು ಆತಂಕಕ್ಕೆ ಕಾರಣವಾಗಿದ್ದು, ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ನಿರ್ಮಿಸಲಾಗಿರುವ ಈ ಪೊಲೀಸ್ ಸಮುಚ್ಚಯದ ಬಿ ಬ್ಲಾಕ್‍ನಲ್ಲಿರುವ ಏಳು ಅಂತಸ್ತಿನ ಕಟ್ಟಡ ಸುಮಾರು ಒಂದು ಅಡಿ ವಾಲಿರುವುದು ಬೆಳಕಿಗೆ ಬಂದಿದೆ.

ವಾಲಿರುವ ಕಟ್ಟಡದಲ್ಲಿ 32 ಪೊಲೀಸ್ ಕುಟುಂಬಗಳು ವಾಸಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿದೆ. ಕೇವಲ ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ವಾಲಿರುವುದನ್ನು ಗಮನಿಸಿದರೆ ಕಳಪೆ ಕಾಮಗಾರಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ವಾಲಿರುವ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿರುವ ಪೊಲೀಸ್ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಅದೇ ರೀತಿ, ಶಾಂತಿನಗರದ ಸರಕಾರಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳ ಕಟ್ಟಡವೂ ವಾಲಿದೆ ಎಂದು ವರದಿಯಾಗಿದೆ. ಇದನ್ನು ನಿರ್ಮಾಣ ಮಾಡಿ ಆರು ದಶಕಗಳೇ ಕಳೆದಿದ್ದು, ನಗರದಲ್ಲಿ ನಿರಂತರ ಮಳೆಯಿಂದಾಗಿ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News