ವಸಿಷ್ಠ ಸೊಸೈಟಿ ಅವ್ಯವಹಾರಗಳ ನಡುವೆಯೇ ಚುನಾವಣೆ: ವಂಚಕರ ಪರ ನಿಂತ ಸಂಸದ ತೇಜಸ್ವಿ ಸೂರ್ಯ; ಶಂಕರ್ ಆರೋಪ

Update: 2021-10-16 12:43 GMT

ಬೆಂಗಳೂರು, ಅ.16: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿದ್ದ ವೆಂಕಟನಾರಾಯಣ ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ರಾಜೀನಾಮೆ ನೀಡಿದ್ದರು. ಈ ಖಾಲಿಯಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗದಿದ್ದರೂ, ಪ್ರಚಾರ ಮಾತ್ರ ಸದ್ದಿಲ್ಲದೇ ನಡೆಯುತ್ತಿದೆ. ವಂಚಕ ಸ್ಪರ್ಧಿಗಳ ಪರ ಸಂಸದ ತೇಜಸ್ವಿ ಸೂರ್ಯ ನಿಂತಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕಾನಾಥ್ ಆರೋಪಿಸಿದ್ದಾರೆ.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನವು ಕಳೆದ ಮೂರು ದಶಕಗಳಿಂದ ವೆಂಕಟನಾರಾಯಣ ಮತ್ತು ಅವರ ಗುಂಪಿನವರ ಕಪಿಮುಷ್ಠಿಯಲ್ಲಿ ಸಿಲುಕಿತ್ತು. ವೆಂಕಟನಾರಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಮಾಜಿ ವಕೀಲ ಅಶೋಕ್ ಹಾರನಹಳ್ಳಿ ಮತ್ತು ಮಹಾಸಭಾದ ಹಿರಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಬ್ರಾಹ್ಮಣರ ಕಣ್ಣೀರಿಗೆ ಕಾರಣರಾದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ನ ಅತಿದೊಡ್ಡ ಸುಸ್ಥಿದಾರ ರಘುನಾಥ್(ಸುಮಾರು 200ಕೋಟಿ ಸಾಲ)ರ ಪರ ವಕಾಲತ್ತು ವಹಿಸಿರುವ ಅಶೋಕ್ ಹಾರನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಖಂಡನೀಯ. ಅಲ್ಲದೇ ಅಶೋಕ್ ಹಾರನಹಳ್ಳಿ ವಿರುದ್ಧ ಹಾಸನದ ಸಿವಿಲ್ ಕೋರ್ಟ್‍ನಲ್ಲಿ ಮಲೆನಾಡು ಎಜುಕೇಶನಲ್ ಟ್ರಸ್ಟ್‍ನ ಅವ್ಯವಹಾರ ಕುರಿತು ದಾವೆ ಹೂಡಲಾಗಿದೆ. ಇಂತಹದ್ದೆ ಆರೋಪದಲ್ಲಿ ವೆಂಕಟನಾರಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇವರಿಗೆ ಬೆಂಬಲವಾಗಿ ನಿಂತಿರುವ ಜನಪ್ರತಿನಿಧಿಗಳಾದ ರವಿಸುಬ್ರಹ್ಮಣ್ಯ ಮತ್ತು ತೇಜಸ್ವಿ ಸೂರ್ಯರ ನಿಲುವು ಸಮಂಜಸವಲ್ಲ ಎಂದು ಅವರು ತಿಳಿಸಿದರು. 

ಅಧ್ಯಕ್ಷ ಸ್ಥಾನಕ್ಕೆ ಮಹಾಸಭಾದ ಹಿರಿಯ ಉಪಾಧ್ಯಕ್ಷರಾಗಿದ್ದ ಲಕ್ಷ್ಮಿಕಾಂತ್ ಸ್ವರ್ಧಿಸುತ್ತಿದ್ದು,    ಮಹಾಸಭಾದ ಬೈಲಾ ಪ್ರಕಾರ ಅಧ್ಯಕ್ಷರು ರಾಜೀನಾಮೆ ನೀಡಿದರೆ ಹಿರಿಯ ಉಪಾಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಳ್ಳಬಹುದಿತ್ತು. ಆದರೆ ವೆಂಕಟನಾರಾಯಣ ಅವರ ಮೇಲೆ ಆಪಾದನೆ ಕೇಳಿ ಬಂದಿದ್ದರಿಂದ ಲಕ್ಷ್ಮಿಕಾಂತ್ ಅಧ್ಯಕ್ಷರಾಗಿರಲು ಒಪ್ಪಲಿಲ್ಲ. ಆದರೆ ಈಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದರ ಹಿಂದಿನ ರಹಸ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು. 

ಕಳೆದ ಮೂರು ದಶಕಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮುದಾಯಕ್ಕೆ ಯಾವುದೇ ಪ್ರಗತಿಪರ ಕೆಲಸವನ್ನು ಮಾಡದೇ ವಂಚಿಸುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ, ಆದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಕೇವಲ 40 ಸಾವಿರ ಜನರು ಮಾತ್ರ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ 24 ರಿಂದ 25 ಸಾವಿರ ಸದಸ್ಯರಿದ್ದರು ಕೇವಲ ಒಂದೇ ಬೂತ್ ಮಾಡುತ್ತಾರೆ ಎಂದು ಆರೋಪಿಸಿದರು. 

ಗೋಷ್ಠಿಯಲ್ಲಿ ಪಿಟಿ ಶ್ರೀನಿವಾಸ್, ಕೋಕಿಲಾ ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News