ಬೆಂಗಳೂರಿನಲ್ಲಿ ಮುಂದುವರಿದ ಮಳೆ: ಕುಸಿದ ತಡೆಗೋಡೆ, ನೆಲಕ್ಕುರಳಿದ ಮರಗಳು

Update: 2021-10-16 13:22 GMT

ಬೆಂಗಳೂರು, ಅ.16: ನಗರದೆಲ್ಲೆಡೆ ಮಳೆ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ವಿವಿಧೆಡೆ ತಡೆಗೋಡೆಗಳು ನೆಲಸಮವಾದರೆ, ಹಲವು ಮರಗಳು ನೆಲಕ್ಕುರಳಿವೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮೂರು ವರ್ಷಗಳ ಹಿಂದೆ ಬಿಬಿಎಂಪಿ ನಿರ್ಮಿಸಿದ್ದ ಗೋಡೆಯೊಂದು ಬಿದ್ದಿರುವ ಘಟನೆ ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕ್‍ನಲ್ಲಿ ನಡೆದಿದೆ.

ಕಳಪೆ ಕಾಮಗಾರಿಯಿಂದ 25 ಅಡಿ ಎತ್ತರದ ಕೋಟೆಯ ಗೋಡೆ ಕುಸಿದಿದೆ. ಅಲ್ಲದೆ, ಬರೋಬ್ಬರಿ 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕೆಂಪೇಗೌಡ ಬೃಹತ್ ಪಾರ್ಕ್ ಇದಾಗಿದ್ದು, ಪಾರ್ಕ್‍ನಲ್ಲಿ ಆಡಿಟೊರಿಯಂ, ಪ್ರತಿಮೆಗಳು ಸೇರಿದಂತೆ 24 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಪಾಲಿಕೆ ಕೈಗೊಂಡಿತ್ತು.

ಮತ್ತೊಂದೆಡೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿಪ್ರೊ ಕಂಪೆನಿಯ ತಡೆಗೋಡೆ ಕುಸಿತಗೊಂಡಿದ್ದು, ಇದರ ಪರಿಣಾಮ ಕಟ್ಟಡದೊಳಗೆ ಮಳೆ ನೀರು ನುಗ್ಗಿದೆ. ಜತೆಗೆ ಮೂರ್ನಾಲ್ಕು ಕಡೆ ಗೋಡೆ ಬಿರುಕು ಬಿಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ನಗರದಲ್ಲಿ ಮರಗಳು ಧರೆಗೆ ಉರುಳಿ ಬೀಳುತ್ತಿವೆ. ಯಶವಂತಪುರದ ಮೈಸೂರು ಲ್ಯಾಂಪ್ಸ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಹಾಗೆಯೇ ಟಿಂಬರ್ ಲೇಔಟ್, ಸಿಎಂಆರ್ ಕಾನೂನು ಕಾಲೇಜ್ ಬಳಿ ಮರ ಬಿದ್ದಿದ್ದು ತೆರವು ಮಾಡಲಾಗಿದೆ. 

ಹೈಗ್ರೌಂಡ್ಸ್ ಹಾಗೂ ಕೆಆರ್ ಗಾರ್ಡನ್ ಮೊದಲನೆ ಹಂತದಲ್ಲೂ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಇಸ್ರೋ ಲೇಔಟ್ ಬಸ್ ನಿಲ್ದಾಣದಲ್ಲಿ ಮರಗಳು ಧರೆಗುರುಳಿದ್ದು, ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಅರಣ್ಯ ಸಿಬ್ಬಂದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News