ರಾಜನಾಥ್ ಸಿಂಗ್ ಹೇಳಿದಂತೆ ಗಾಂಧೀಜಿಯವರ ಸಲಹೆಯ ಮೇರೆಗೆ ಸಾವರ್ಕರ್ ಕ್ಷಮೆಯಾಚನೆ ಅರ್ಜಿ ಬರೆದಿದ್ದರೇ?

Update: 2021-10-16 13:29 GMT

 ಹೊಸದಿಲ್ಲಿ,ಅ.16: ಮಹಾತ್ಮಾ ಗಾಂಧಿಯವರ ಸಲಹೆಯ ಮೇರೆಗೆ ಹಿಂದು ಮಹಾಸಭಾದ ನಾಯಕ ವಿ.ಡಿ.ಸಾವರ್ಕರ್ ಅವರು ಬ್ರಿಟಿಷ್ ಸರಕಾರಕ್ಕೆ ಕ್ಷಮೆಯಾಚನೆ ಅರ್ಜಿಗಳನ್ನು ಬರೆದಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇತ್ತೀಚಿಗೆ ಹೇಳಿದ್ದಾರೆ. altnews.in ನ ಪತ್ರಕರ್ತೆ ಪೂಜಾ ಚೌಧುರಿ ಅವರು ಸಿಂಗ್ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಪ್ರತಿಪಾದಿಸಿ ಸಾಕ್ಷಾಧಾರಗಳನ್ನು ಉಲ್ಲೇಖಿಸಿ ಲೇಖನವೊಂದನ್ನು ಬರೆದಿದ್ದಾರೆ. ಲೇಖನದ ಸಾರಾಂಶವಿಲ್ಲಿದೆ..

ಬುಧವಾರ ಉದಯ ಮಹೂರಕರ್ ಮತ್ತು ಚಿರಾಯು ಪಂಡಿತ ಅವರ ‘ವೀರ ಸಾವರ್ಕರ್:ವಿಭಜನೆಯನ್ನು ತಡೆಯಬಹುದಾಗಿದ್ದ ವ್ಯಕ್ತಿ’ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಿಂಗ್ ಈ ಮಾತನ್ನು ಹೇಳಿದ್ದರು. ಸಾವರ್ಕರ್ ತಾನಾಗಿಯೇ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಕ್ಷಮಿಸುವಂತೆ ಬೇಡಿಕೊಂಡಿದ್ದರು ಎನ್ನುವುದು ಅಪ್ಪಟ ಸುಳ್ಳಾಗಿದೆ ಮತ್ತು ಆಧಾರರಹಿತವಾಗಿದೆ ಎಂದು ಸಿಂಗ್ ಪ್ರತಿಪಾದಿಸಿದ್ದರು.

ಸಿಂಗ್ ಹೇಳಿಕೆ ಸತ್ಯ ಎಂದು ಪ್ರತಿಪಾದಿಸಿ ಬಿಜೆಪಿ ಪರ ವೆಬ್ಸೈಟ್ ಸ್ವರಾಜ್ಯ ಲೇಖನವೊಂದನ್ನು ಪ್ರಕಟಿಸಿದೆ. ‘ಸಾವರ್ಕರ್ ಅವರ ಪರಂಪರೆಯನ್ನು ಅವರ ಕ್ಷಮೆಯಾಚನೆ ಅರ್ಜಿಗೆ ಸೀಮಿತಗೊಳಿಸಲು ಮತ್ತು ಇತಿಹಾಸದಲ್ಲಿ ಅವರಿಗೆ ಅರ್ಹವಾದ ಸ್ವಾತಂತ್ರ ಹೋರಾಟಗಾರನ ಸ್ಥಾನವನ್ನು ನಿರಾಕರಿಸಲು ದಶಕಗಳಿಂದಲೂ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಮಾರ್ಕ್ಸ್ ವಾದಿ ಇತಿಹಾಸಕಾರರು ಸೇರಿದಂತೆ ಎಡಪಂಥೀಯ ಕಾರ್ಯಕರ್ತರು ರಕ್ಷಣಾ ಸಚಿವರ ಹೇಳಿಕೆ ಸುಳ್ಳು ಎಂದು ಹೇಳುತ್ತಿದ್ದಾರೆ ’ಎಂದು ಲೇಖನದಲ್ಲಿ ಟೀಕಿಸಿರುವ ಸ್ವರಾಜ್ಯ,ಅದನ್ನು ಸಮರ್ಥಿಸಿಕೊಳ್ಳಲು ಸಾವರ್ಕರ್ ಕುರಿತು ವಿಕ್ರಮ ಸಂಪತ್ ಅವರ ಕೃತಿಯನ್ನು ಉಲ್ಲೇಖಿಸಿದೆ. ‌

‘1920ರಲ್ಲಿ ಗಾಂಧೀಜಿ ಅರ್ಜಿಯನ್ನು ಸಲ್ಲಿಸುವಂತೆ ಸಾವರ್ಕರ್ ಸೋದರರಿಗೆ ಸಲಹೆಯನ್ನು ನೀಡಿದ್ದರು ಮತ್ತು ಯಂಗ್ ಇಂಡಿಯಾದ 26 ಮೇ 1920ರ ಸಂಚಿಕೆಯಲ್ಲಿ ಅವರ ಬಿಡುಗಡೆಗೆ ಆಗ್ರಹಿಸಿ ಲೇಖನವೊಂದನ್ನೂ ಬರೆದಿದ್ದರು ’ಎಂದು ಸಾವರ್ಕರ್ ಅವರ ಜೀವನಚರಿತ್ರಕಾರ ಸಂಪತ್ ಟ್ವೀಟಿಸಿದ್ದಾರೆ.

ಬ್ರಿಟಿಷ್ ಸರಕಾರವು 1910,ಮಾ.13ರಂದು ಸಾವರ್ಕರ್ರನ್ನು ಬಂಧಿಸಿದ್ದು, 1911 ಜು.4ರಂದು ಅವರನ್ನು ಕಾಲಾಪಾನಿ ಶಿಕ್ಷೆ ಅನುಭವಿಸಲು ಅಂಡಮಾನ್ನ ಸೆಲ್ಯುಲರ್ ಜೈಲಿಗೆ ಕರೆತರಲಾಗಿತ್ತು.

ಆಗ ನಾಸಿಕ್ ಜಿಲ್ಲಾಧಿಕಾರಿಯಾಗಿದ್ದ ಎಎಂಟಿ ಜಾಕ್ಸನ್ ಹತ್ಯೆಯ ಬಳಿಕ ಸಾವರ್ಕರ್ರನ್ನು ಬಂಧಿಸಲಾಗಿತ್ತು. ಜಾಕ್ಸನ್ ಹತ್ಯೆ ಸಂದರ್ಭ ಸಾವರ್ಕರ್ ಲಂಡನ್ನಲ್ಲಿದ್ದರು. ಜಾಕ್ಸನ್ ಹತ್ಯೆಗೆ ಬಳಕೆಯಾಗಿದ್ದ ಪಿಸ್ತೂಲನ್ನು ಲಂಡನ್ನಿಂದ ಪೂರೈಸಿದ್ದ ಆರೋಪ ಅವರ ಮೇಲಿತ್ತು.

ಸಾವರ್ಕರ್ ಮತ್ತು ಅವರ ಹಿರಿಯ ಸೋದರ ಗಣೇಶ ದಾಮೋದರ ಸಾವರ್ಕರ್ ಅವರು ನಾಸಿಕ್ನಲ್ಲಿ ‘ಮಿತ್ರ ಮೇಳ (ಈಗಿನ ಅಭಿನವ ಭಾರತ)’ ಎಂಬ ಗುಪ್ತ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿದ್ದರು. ಇದು ಜಾಕ್ಸನ್ ಹತ್ಯೆಯೊಂದಿಗೆ ಸಂಬಂಧವನ್ನು ಹೊಂದಿತ್ತು. ಬ್ರಿಟಿಷ್ ಅಧಿಕಾರಿಯೋರ್ವನ ಹತ್ಯೆಯ ಪ್ರತ್ಯೇಕ ಪ್ರಕರಣದಲ್ಲಿ ಗಣೇಶ ಸಾವರ್ಕರ್ನ್ನು ಒಂದು ವರ್ಷ ಮೊದಲು ಬಂಧಿಸಲಾಗಿತ್ತು.

1911ರಲ್ಲಿ ಸಾವರ್ಕರ್ ಮೊದಲ ಕ್ಷಮೆಯಾಚನೆ ಅರ್ಜಿಯನ್ನು ಸಲ್ಲಿಸಿದ್ದರು.

‘ದಿಲ್ಲಿ ದರ್ಬಾರ್ನ ಸದ್ಭಾವನೆಯ ಸಂಕೇತವಾಗಿ ಎಲ್ಲ ರಾಜಕೀಯ ಕೈದಿಗಳು ತಮ್ಮ ಬಿಡುಗಡೆ ಮತ್ತು ಕ್ಷಮೆಯನ್ನು ಕೋರಿ ಸರಕಾರಕ್ಕೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಸಾವರ್ಕರ್ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಕ್ಷಮೆಯಾಚನೆ ಅರ್ಜಿಗಳನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸಿದ್ದರು. ಸಾವರ್ಕರ್ ಅರ್ಜಿಯನ್ನು 1911,ಆ.30ರಂದು ಸ್ವೀಕರಿಸಲಾಗಿತ್ತು.

ಅರ್ಜಿಯ ಪ್ರತಿ ಲಭ್ಯವಿಲ್ಲದಿದ್ದರೂ ಅವರ ‘ಜೈಲ್ ಹಿಸ್ಟರಿ ಟಿಕೆಟ್’ನಲ್ಲಿ ಅದರ ಉಲ್ಲೇಖ ಮಾತ್ರ ಉಳಿದುಕೊಂಡಿದೆ .’ ಇದು ಸಂಪತ್ ಅವರ ‘ಇಕೋಸ್ ಫ್ರಮ್ ಎ ಫರ್ಗಾಟನ್ ಪಾಸ್ಟ್,1883-1924 ’ ಕೃತಿಯ ಆಯ್ದ ಭಾಗ. ಸಾವರ್ಕರ್ ಅವರು ಕ್ಷಮೆಯಾಚನೆ ಅರ್ಜಿ ಸಲ್ಲಿಸಿದ್ದಾಗ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿದ್ದರು ಮತ್ತು ನಾಲ್ಕು ವರ್ಷಗಳ ನಂತರವೇ ಭಾರತಕ್ಕೆ ಮರಳಿದ್ದರು.

ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳುವ ಮೊದಲೇ ಸಾವರ್ಕರ್ ತನ್ನ ಎರಡನೇ ಕ್ಷಮೆಯಾಚನೆ ಅರ್ಜಿಯನ್ನು ಸಲ್ಲಿಸಿದ್ದರು.

1920ರಲ್ಲಿ ಗಾಂಧೀಜಿ,ಸಾವರ್ಕರ್ ಅಪರಾಧವು ಸಂಪೂರ್ಣವಾಗಿ ರಾಜಕೀಯ ಸ್ವರೂಪದ್ದಾಗಿದೆ ಎಂದು ತಿಳಿಸಿ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಅವರ ಕಿರಿಯ ಸೋದರ ನಾರಾಯಣ ದಾಮೋದರ ಸಾವರ್ಕರ್ಗೆ ಸಲಹೆ ನೀಡಿದ್ದರು. ಬಿಡುಗಡೆಗಾಗಿ ಬ್ರಿಟಿಷ್ ಸರಕಾರವು ಸಿದ್ಧಗೊಳಿಸಿದ್ದ ಕೈದಿಗಳ ಪಟ್ಟಿಯಲ್ಲಿ ತನ್ನ ಸೋದರರ ಹೆಸರುಗಳಿಲ್ಲದ ಹಿನ್ನೆಲೆಯಲ್ಲಿ ನೆರವಿಗಾಗಿ ಕೋರಿ ನಾರಾಯಣ ಗಾಂಧೀಜಿಯವರಿಗೆ ಪತ್ರವನ್ನು ಬರೆದ ಬಳಿಕ ಈ ಬೆಳವಣಿಗೆ ನಡೆದಿತ್ತು. 

ತನ್ನ ಉತ್ತರದಲ್ಲಿ ಗಾಂಧೀಜಿ ಈ ವಿಷಯದಲ್ಲಿ ತಾನು ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತಿರುವುದಾಗಿಯೂ ತಿಳಿಸಿದ್ದರು ’ ಎಂದು ಸಿಂಗ್ ಹೇಳಿಕೆ ನಿಜ ಎಂಬ ಸುಳ್ಳನ್ನು ಪ್ರತಿಪಾದಿಸಲು ಸ್ವರಾಜ್ಯ ಉಲ್ಲೇಖಿಸಿರುವ ಕೃತಿಕಾರ ಸಂಪತ್ ಬರೆದಿದ್ದಾರೆ. ‘ಮಹಾತ್ಮಾ ಗಾಂಧಿಯವರ ಸಂಗ್ರಹಿತ ಕೃತಿಗಳು ’ಸಂಪುಟ 19ರಲ್ಲಿಯೂ ಈ ಉತ್ತರವನ್ನು ನೋಡಬಹುದು.

ಎರಡು ತಿಂಗಳುಗಳ ಬಳಿಕ 1920,ಮಾ.30ರಂದು ಸಾವರ್ಕರ್ ಕ್ಷಮೆಯನ್ನು ಯಾಚಿಸಿ ಮತ್ತೊಮ್ಮೆ ಬ್ರಿಟಿಷ್ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ನೂರಾರು ಕೈದಿಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕಾಗಿ ಬ್ರಿಟಿಷ್ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದ ಅವರು,ತಾನು ಮತ್ತು ತನ್ನ ಸೋದರ ಸೇರಿದಂತೆ ಇತರ ಕೈದಿಗಳಿಗೂ ಕ್ಷಮಾದಾನ ನೀಡುವಂತೆ ಆಗ್ರಹಿಸಿದ್ದರು.

ಜು.6ರಂದು ತನ್ನ ಸೋದರನಿಗೆ ಬರೆದಿದ್ದ ಪತ್ರದಲ್ಲಿಯೂ ಸಾವರ್ಕರ್ ತನ್ನ ಕ್ಷಮೆಯಾಚನೆ ಅರ್ಜಿಯ ಬಗ್ಗೆ ತಿಳಿಸಿದ್ದರು. ಅವರು ಗಾಂಧೀಜಿಯವರ ಹೆಸರನ್ನು ತನ್ನ ಪತ್ರದಲ್ಲಿ ಉಲ್ಲೇಖಿಸಿರಲಿಲ್ಲ.

ಕೈದಿಗಳ ಬಿಡುಗಡೆಗಾಗಿ ಭಾರತ ಸರಕಾರ ಮತ್ತು ಪ್ರಾಂತಿಯ ಸರಕಾರಗಳಿಗೆ ಧನ್ಯವಾದಗಳಲ್ಲಿ ಸಲ್ಲಿಸಿ 1920,ಮೇ 26ರಂದು ತನ್ನ ‘ಯಂಗ್ ಇಂಡಿಯಾ’ಸಾಪ್ತಾಹಿಕದಲ್ಲಿ ಲೇಖವನ್ನು ಬರೆದಿದ್ದ ಗಾಂಧೀಜಿ,ಆದರೆ ಕೆಲವು ಗಮನಾರ್ಹ ರಾಜಕೀಯ ಆರೋಪಿಗಳನ್ನು ಈವರೆಗೆ ಬಿಡುಗಡೆಗೊಳಿಸಿಲ್ಲ. ಅವರಲ್ಲಿ ಸಾವರ್ಕರ್ ಸೋದರರು ಸೇರಿದ್ದಾರೆ. ಅವರಿಬ್ಬರೂ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಘೋಷಿಸಿದ್ದಾರೆ ಮತ್ತು ಯಾವುದೇ ಕ್ರಾಂತಿಕಾರಿ ವಿಚಾರಗಳಿಗೆ ತಾವು ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ರಾಜಕೀಯ ಹೊಣೆಗಾರಿಕೆಯನ್ನು ಸಾಧಿಸಲು ಸುಧಾರಣೆ ವ್ಯಕ್ತಿಯನ್ನು ಸಾಧ್ಯವಾಗಿಸುತ್ತದೆ ಎಂದು ತಾವು ಪರಿಗಣಿಸಿರುವುದರಿಂದ ತಮ್ಮನ್ನು ಬಿಡುಗಡೆಗೊಳಿಸಿದರೆ ತಾವು ಸುಧಾರಣಾ ಕಾಯ್ದೆ 4ರಡಿ ಕಾರ್ಯ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.

ಬ್ರಿಟಿಷರಿಂದ ಸ್ವಾತಂತ್ರವನ್ನು ತಾವು ಬಯಸಿಲ್ಲ ಎಂದು ನಿಸಂದಿಗ್ಧವಾಗಿ ತಿಳಿಸಿರುವ ಸಾವರ್ಕರ್ ಸೋದರರು,ಬದಲಾಗಿ ಬ್ರಿಟಷರ ಜೊತೆಗೂಡಿ ಭಾರತದ ಭವಿಷ್ಯವನ್ನು ಅತ್ಯುತ್ತಮವಾಗಿ ರೂಪಿಸಬಹುದು ಎಂದು ಭಾವಿಸಿದ್ದಾರೆ.ಈಗಾಗಲೇ ಸುದೀರ್ಘ ಜೈಲುವಾಸವನ್ನು ಅನುಭವಿಸಿ ಶಾರೀರಿಕವಾಗಿ ದುರ್ಬಲರಾಗಿರುವ ಮತ್ತು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಘೋಷಿಸಿರುವ ಅವರ ಬಿಡುಗಡೆಯಿಂದ ಸರಕಾರಕ್ಕೆ ಅಪಾಯವಿದೆ ಎಂಬ ಬಗ್ಗೆ ಯಾವುದೇ ಗಟ್ಟಿ ಪುರಾವೆಗಳಿಲ್ಲದಿದ್ದರೆ ವೈಸರಾಯ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದರು. ಸಾವರ್ಕರ್ರನ್ನು ಮೇ 1920ರಲ್ಲಿ ಅಂಡಮಾನ್ ಜೈಲಿನಿಂದ ರತ್ನಾಗಿರಿ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಯಂಗ್ ಇಂಡಿಯಾದ 1921,ಮೇ 18ರ ಸಂಚಿಕೆಯಲ್ಲಿ ಸಾವರ್ಕರ್ರನ್ನು ದೇಶಭಕ್ತ ಎಂದು ಹೊಗಳಿದ್ದ ಗಾಂಧೀಜಿ,‘ಸರಕಾರದ ಈಗಿನ ವ್ಯವಸ್ಥೆಯಲ್ಲಿ ಕೆಡುಕುಗಳನ್ನು ಅವರು ನನಗಿಂತ ಬಹಳ ಮೊದಲೇ ನೋಡಿದ್ದರು. ಭಾರತವನ್ನು ಅತಿಯಾಗಿ ಪ್ರೀತಿಸಿದ್ದಕ್ಕಾಗಿ ಅವರು ಅಂಡಮಾನ್ ಜೈಲಿನಲ್ಲಿದ್ದಾರೆ ’ಎಂದು ಬರೆದಿದ್ದರು.

 ಆದರೆ ಸಾವರ್ಕರ್ರ ಹಿಂಸಾತ್ಮಕ ರೀತಿಗಳನ್ನು ಗಾಂಧೀಜಿ ಒಪ್ಪಿಕೊಂಡಿರಲಿಲ್ಲ. ಡಾ.ಮೂಂಜೆ ಮತ್ತು ಸಾವರ್ಕರ್ ಅವರಂತಹ ಹಿಂದುಗಳು ಖಡ್ಗ ಸಿದ್ಧಾಂತದಲ್ಲಿ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಮುಸಲ್ಮಾನರನ್ನು ಬಹುಸಂಖ್ಯಾಕ ಹಿಂದುಗಳ ಅಡಿಯಾಳಾಗಿಸಲು ಬಯಸಬಹುದು. ತಾನು ಈ ವರ್ಗವನ್ನುಪ್ರತಿನಿಧಿಸುವದಿಲ್ಲ,ತಾನು ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತೇನೆ ಎಂದು ಗಾಂಧೀಜಿ 1942ರಲ್ಲಿ ಆಗಿನ ಬಾಂಬೆಯಲ್ಲಿ ಎಐಸಿಸಿ ಸಭೆಯಲ್ಲಿ ಹೇಳಿದ್ದರು.

1924ರಲ್ಲಿ ಸಾವರ್ಕರ್ರನ್ನು ರತ್ನಗಿರಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಮತ್ತು ರತ್ನಾಗಿರಿ ಜಿಲ್ಲೆಯಲ್ಲಿಯೇ ನೆಲೆಸುವುದು ಸೇರಿದಂತೆ ವಿವಿಧ ಷರತ್ತುಗಳನ್ನು ಅವರಿಗೆ ವಿಧಿಸಲಾಗಿತ್ತು.

ಗಾಂಧೀಜಿಯವರ ಸೂಚನೆಯ ಮೇರೆಗೆ ಸಾವರ್ಕರ್ ಕ್ಷಮೆ ಯಾಚನೆ ಅರ್ಜಿಯನ್ನು ಸಲ್ಲಿಸಿದ್ದರು ಎನ್ನುವುದಕ್ಕೆ ಸಾರ್ವಜನಿಕವಾಗಿ ಯಾವುದೇ ದಾಖಲೆ ಲಭ್ಯವಿಲ್ಲ. ಅವರು ಮೊದಲ ಎರಡು ಕ್ಷಮೆಯಾಚನೆ ಅರ್ಜಿಗಳನ್ನು ಸಲ್ಲಿಸಿದ್ದಾಗ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಮೂರನೇ ಅರ್ಜಿಸಲ್ಲಿಸಿದ ಬಳಿಕ ಸೋದರ ನಾರಾಯಣ ಸಾವರ್ಕರ್ ಗೆ ಬರೆದಿದ್ದ ಪತ್ರದಲ್ಲಿ ಗಾಂಧೀಜಿ ಹೆಸರನ್ನು ಅವರು ಉಲ್ಲೇಖಿಸಿರಲಿಲ್ಲ. ಇವೆಲ್ಲವೂ ಸಾವರ್ಕರ್ ಕುರಿತು ರಾಜನಾಥ ಹೇಳಿಕೆ ಅಪ್ಪಟ ಸುಳ್ಳು ಎನ್ನುವುದನ್ನು ಬೆಟ್ಟು ಮಾಡುತ್ತಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News