ಇಂದಿನಿಂದ ಗಲ್ಫ್ ರಾಷ್ಟ್ರದಲ್ಲಿ ಐಸಿಸಿ ಟ್ವೆಂಟಿ ಟಿ-20 ವಿಶ್ವಕಪ್

Update: 2021-10-16 18:50 GMT

ಅಲ್ ಅಮೆರ್ಟ್(ಒಮಾನ್), ಅ.16: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ರವಿವಾರ ಯುಎಇ ಹಾಗೂ ಒಮಾನ್‌ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಆರಂಭವಾಗಲಿದೆ. ಬಿ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಒಮಾನ್ ತಂಡ ಪಪುವಾ ನ್ಯೂಗಿನಿ(ಪಿಎನ್‌ಜಿ)ತಂಡವನ್ನು ಎದುರಿಸಿದರೆ, ದಿನದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡ ಮುಖಾಮುಖಿಯಾಗಲಿದೆ.

ಬಿ ಗುಂಪಿನ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಬಾಂಗ್ಲಾದೇಶ ಪಂದ್ಯ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ. ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿ ಸ್ಕಾಟ್ಲೆಂಡ್, ಒಮಾನ್ ಹಾಗೂ ಪಪುವಾ ನ್ಯೂ ಗಿನಿ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಇತ್ತೀಚೆಗಿನ ಫಾರ್ಮ್ ಅನ್ನು ಪರಿಗಣಿಸಿದರೆ ಬಾಂಗ್ಲಾದೇಶವು ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಸೂಪರ್-12ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬಾಂಗ್ಲಾದೇಶವು ಕ್ಯಾಲೆಂಡರ್ ವರ್ಷದಲ್ಲಿ 9 ಟಿ-20 ಪಂದ್ಯಗಳನ್ನು ಜಯಿಸಿದೆ. ಮಾರ್ಚ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ವಿದೇಶಿ ನೆಲದಲ್ಲಿ ಸೋತ ಬಳಿಕ ಬಾಂಗ್ಲಾದೇಶವು ಝಿಂಬಾಬ್ವೆ(2-1), ಆಸ್ಟ್ರೇಲಿಯ(4-1) ಹಾಗೂ ನ್ಯೂಝಿಲ್ಯಾಂಡ್(3-2) ವಿರುದ್ಧ ಸರಣಿ ಜಯ ದಾಖಲಿಸಿತ್ತು. ಒಂದು ವೇಳೆ ಮುಂದಿನ ಸುತ್ತಿಗೆ ಬಾಂಗ್ಲಾ ಅರ್ಹತೆ ಪಡೆದರೆ ಸೂಪರ್-12ರಲ್ಲಿ ಭಾರತ, ಅಫ್ಘಾನಿಸ್ತಾನ, ನ್ಯೂಝಿಲ್ಯಾಂಡ್, ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದೆ.

ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ದಾಖಲೆ ಆಶಾದಾಯಕವಾಗಿಲ್ಲ. 2007ರ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ ಯಶಸ್ಸು ಕಂಡಿದ್ದ ಬಾಂಗ್ಲಾವು ಸೂಪರ್-8ಕ್ಕೆ ತಲುಪಿತ್ತು. ಆದರೆ 2009, 2010 ಹಾಗೂ 2012ರ ಆವೃತ್ತಿಯ ವಿಶ್ವಕಪ್‌ನಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2016ರಲ್ಲಿ ನಡೆದಿದ್ದ ಟಿ-20ಯಲ್ಲಿ 16 ತಂಡಗಳಿಗೆ ಅವಕಾಶ ನೀಡಿದ್ದ ಕಾರಣ ಬಾಂಗ್ಲಾವು ಗೆಲುವಿನ ಹಾದಿಗೆ ಮರಳಿತ್ತು. ಮೊದಲ ಸುತ್ತಿನಲ್ಲಿ ‘ಎ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದ ಬಾಂಗ್ಲಾವು ಸೂಪರ್-10ರ ಹಂತದಲ್ಲಿ ಎಲ್ಲ 4 ಪಂದ್ಯಗಳನ್ನು ಸೋತಿತ್ತು. 2016ರ ವಿಶ್ವಕಪ್‌ನಲ್ಲೂ ಕಳಪೆ ಪ್ರದರ್ಶನ ಪುನರಾವರ್ತಿಸಿದ್ದ ಬಾಂಗ್ಲಾವು ಭಾರತ ವಿರುದ್ಧ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಇದೀಗ ಸರಿಯಾದ ಸಮಯಕ್ಕೆ ಫಾರ್ಮ್‌ಗೆ ಮರಳಿದೆ.

ಬಾಂಗ್ಲಾದೇಶ ತಂಡದಲ್ಲಿ ಅನುಭವಿಗಳು ಹಾಗೂ ಹೊಸ ಆಟಗಾರರ ಮಿಶ್ರಣವಿದೆ. ಮಹಮುದುಲ್ಲಾ ತಂಡದ ನಾಯಕತ್ವವಹಿಸಿಕೊಂಡಿದ್ದು,ಆಲ್‌ರೌಂಡರ್ ಶಾಕಿಬ್ ಅಲ್ ಹಸನ್, ಮುಶ್ಫಿಕುರ್ರಹೀಂ, ಸೌಮ್ಯ ಸರ್ಕಾರ್ ಹಾಗೂ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಪ್ರಮುಖ ಆಟಗಾರರಾಗಿದ್ದಾರೆ. ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರ ಅನುಪಸ್ಥಿತಿಯಲ್ಲಿ ಲಿಟನ್ ದಾಸ್, ನೈಯಿಮ್ ಶೇಕ್, ಶಾಕಿಬ್, ಮುಶ್ಫಿಕುರ್ರಹೀಂ ಮೇಲೆ ಬ್ಯಾಟಿಂಗ್ ಜವಾಬ್ದಾರಿ ಹೆಚ್ಚಾಗಿದೆ. ಮತ್ತೊಂದೆಡೆ ಸ್ಕಾಟ್ಲೆಂಡ್ ತಂಡ ನಾಲ್ಕನೇ ಬಾರಿ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದೆ. ತಂಡದ ನಾಯಕ ಕೈಲ್ ಕೊಟ್ಝೆರ್, ಜಾರ್ಜ್ ಮುನ್ಸೆ , ಕಾಲಂ ಮೆಕ್‌ಲಿಯೊಡ್ ಹಾಗೂ ರಿಚಿ ಬ್ಯಾರಿಂಗ್ಟನ್ ಬ್ಯಾಟಿಂಗ್ ವಿಭಾಗದಲ್ಲಿದ್ದಾರೆ. ಬ್ರಾಡ್ ವೀಲ್ ಹಾಗೂ ಜೋಶ್ ಡಾವೆ ಬೌಲಿಂಗ್ ಘಟಕವನ್ನು ಮುನ್ನೆಡೆಸಲಿದ್ದಾರೆ.

► ಪಂದ್ಯ ಆರಂಭದ ಸಮಯ: ರಾತ್ರಿ 7:30 (ಭಾರತೀಯ ಕಾಲಮಾನ)

ಐದು ವರ್ಷಗಳ ಬಳಿಕ ಮತ್ತೊಮ್ಮೆ ಟಿ-20 ವಿಶ್ವಕಪ್ ನಡೆಯುತ್ತಿದೆ. ಟೂರ್ನಿಯು ಅ.17ರಿಂದ ಆರಂಭವಾಗಲಿದ್ದು, ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿಯ ವಿಶ್ವಕಪ್ ಆತಿಥ್ಯವನ್ನು ಬಿಸಿಸಿಐ ವಹಿಸಿಕೊಂಡಿದೆ. ಆದರೆ ಪಂದ್ಯಗಳು ಯುಎಇ ಹಾಗೂ ಒಮಾನ್‌ನಲ್ಲಿ ನಡೆಯಲಿವೆ. ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೂರನೇ ಅಲೆಯ ಭೀತಿಯಲ್ಲಿ ಜೂನ್‌ನಲ್ಲಿ ಟಿ-20 ವಿಶ್ವಕಪ್‌ನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಟೂರ್ನಿಯನ್ನು ಎರಡು ಹಂತದಲ್ಲಿ ಆಡಲಾಗುತ್ತಿದೆ. ಮೊದಲ ಹಂತದಲ್ಲಿ 8 ತಂಡಗಳು ಇರುತ್ತವೆ. ಇದನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ.

► ಎ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್‌ಲ್ಯಾಂಡ್ ಹಾಗೂ ನಮೀಬಿಯಾ

► ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿ ಹಾಗೂ ಒಮಾನ್ ತಂಡಗಳಿವೆ.

ಪ್ರತಿ ತಂಡ ತಲಾ ಒಂದು ಬಾರಿ ಆಡಲಿವೆ. ಮೊದಲ ಹಂತದಲ್ಲಿ 12 ಪಂದ್ಯಗಳು ನಡೆದ ಬಳಿಕ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-12 ಸುತ್ತಿಗೇರುತ್ತವೆ. ಸೂಪರ್-12ರಲ್ಲಿ ಅಗ್ರ-8 ರ್ಯಾಂಕಿನಲ್ಲಿರುವ ಟಿ-20 ತಂಡಗಳನ್ನು ಸೇರಿಸಿಕೊಳ್ಳುತ್ತವೆ. ಸೂಪರ್-12 ಹಂತದಲ್ಲಿ ತಂಡಗಳನ್ನು ಮತ್ತೊಮ್ಮೆ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಗ್ರೂಪ್-1: ಇಂಗ್ಲೆಂಡ್, ಆಸ್ಟ್ರೇಲಿಯ, ದ.ಆಫ್ರಿಕಾ, ವೆಸ್ಟ್‌ಇಂಡೀಸ್, ಎ1 ಹಾಗೂ ಬಿ 2

► ಗ್ರೂಪ್ 2: ಭಾರತ, ಪಾಕಿಸ್ತಾನ, ನ್ಯೂಝಿಲ್ಯಾಂಡ್,ಅಫ್ಘಾನಿಸ್ತಾನ, ಬಿ1 ಹಾಗೂ ಎ 2.

 ಮತ್ತೊಮ್ಮೆ ತಂಡಗಳು ತಮ್ಮ ಗುಂಪಿನಲ್ಲಿ ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಈ ಸುತ್ತಿನಲ್ಲಿ 30 ಪಂದ್ಯಗಳು ಇರುತ್ತವೆ. ಪಂದ್ಯಗಳನ್ನು ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ ಆಡಲಾಗುತ್ತದೆ. ಪ್ರತಿ ಗುಂಪಿನ ಎರಡು ಅಗ್ರ ತಂಡಗಳು ಸೆಮಿ ಫೈನಲ್ ತಲುಪುತ್ತವೆ. ಪುರುಷರ ಟಿ-20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ(ಡಿಆರ್‌ಎಸ್)ಅಳವಡಿಸಲಾಗುತ್ತಿದೆ. ಪ್ರತಿ ತಂಡ ಪ್ರತಿಯೊಂದು ಇನಿಂಗ್ಸ್‌ನಲ್ಲಿ ಗರಿಷ್ಠ 2 ಡಿಆರ್‌ಎಸ್ ಪಡೆಯಬಹುದು. ಗ್ರೂಪ್ ಹಂತದ ಪಂದ್ಯಗಳಿಗೆ ಮೀಸಲು ದಿನಗಳು ಇರುವುದಿಲ್ಲ. ಕೇವಲ ಸೆಮಿ ಫೈನಲ್‌ಗಳು ಹಾಗೂ ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವಿದೆ.

ಚಾಂಪಿಯನ್ ತಂಡಕ್ಕೆ ಬಹುಮಾನ ಮೊತ್ತ

ಚಾಂಪಿಯನ್ ತಂಡವು 1.6 ಮಿಲಿಯನ್ ಯುಎಸ್ ಡಾಲರ್(12 ಕೋಟಿ.ರೂ.), ರನ್ನರ್ಸ್ ಅಪ್ 800,000 ಯುಎಸ್ ಡಾಲರ್ (6 ಕೋ.ರೂ.) ಹಾಗೂ ಸೆಮಿ ಫೈನಲ್‌ನಲ್ಲಿ ಸೋಲುವ ತಂಡಗಳು ತಲಾ 400,000 ಯುಎಸ್ ಡಾಲರ್(ತಲಾ 3 ಕೋ.ರೂ.) ಬಹುಮಾನ ಸ್ವೀಕರಿಸಲಿವೆ.

ವಿಶ್ವಕಪ್‌ನಲ್ಲಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶವಿದೆ. ಒಮಾನ್‌ನಲ್ಲಿ 3,000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ದೇಶ ಹಾಗೂ ಕ್ರೀಡಾಂಗಣದೊಳಗೆ ಪ್ರವೇಶಿಸುವವರು ಕಡ್ಡಾಯವಾಗಿ ಸಂಪೂರ್ಣ ಲಸಿಕೆ ಪಡೆದಿರುಬೇಕು ಎಂದು ಒಮಾನ್ ಸರಕಾರ ಘೋಷಿಸಿದೆ. ಯುಎಇನಲ್ಲಿ ಎಲ್ಲ ಕ್ರೀಡಾಂಗಣಗಳು ಸುಮಾರು 70 ಶೇ. ಗರಿಷ್ಠ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಅಬುಧಾಬಿಯಲ್ಲಿ ಸ್ಟೇಡಿಯಂ ಪ್ರವೇಶಿಸಲು ಎರಡು ಲಸಿಕೆ ಪಡೆಯಬೇಕಾದ ಅಗತ್ಯವಿದೆ. ದುಬೈ ಹಾಗೂ ಶಾರ್ಜಾದಲ್ಲಿ ಈ ರೀತಿಯ ನಿಯಮಗಳಿಲ್ಲ. ಈ ಎರಡು ತಾಣಗಳಲ್ಲಿ ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News