ಯುವಕರಿಗೆ ತಲವಾರವಲ್ಲ ಉದ್ಯೋಗ ಬೇಕು

Update: 2021-10-18 06:24 GMT

ಈಗ ನಮಗೆ ಬೇಕಾಗಿರುವುದು ಪರಸ್ಪರ ಪ್ರೀತಿಸುವ ಆಧುನಿಕ ಹೊಸ ಭಾರತ. ಎಲ್ಲರ ಕೈಗೆ ಉದ್ಯೋಗ, ಎಲ್ಲರಿಗೂ ಮನೆ, ಎಲ್ಲರಿಗೂ ಊಟ, ಎಲ್ಲರೂ ಖುಷಿಯಿಂದ ಬದುಕುವ ಭಾರತ. ತ್ರಿಶೂಲ, ತಲವಾರು, ದೊಣ್ಣೆ, ಲಾಠಿಗಳಿಂದ ಅಂಥ ಭಾರತವನ್ನು ನಿರ್ಮಾಣ ಮಾಡುವುದು ಸಾಧ್ಯವಿಲ್ಲ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿರುವಾಗ, ಒಂದೆಡೆ ಕೊರೋನ ಮತ್ತು ಲಾಕ್‌ಡೌನ್‌ನಿಂದ ಕೈಯಲ್ಲಿದ್ದ ಉದ್ಯೋಗ ಕಳೆದುಕೊಂಡು ಜನ ಬೀದಿಗೆ ಬಿದ್ದಿರುವಾಗ, ವಿಪರೀತ ಬೆಲೆ ಏರಿಕೆಯಿಂದ ಜನ ಸಾಮಾನ್ಯರ, ಮಧ್ಯಮ ವರ್ಗದವರ ಬದುಕು ಚಿಂದಿ ಚಿಂದಿಯಾಗುತ್ತಿರುವಾಗ ಇವರಿಗೆ ತ್ರಿಶೂಲ ದೀಕ್ಷೆ ಮತ್ತು ತಲವಾರು ದೀಕ್ಷೆ ನೆನಪಾಗಿದೆ.

ಆಯುಧ ಪೂಜೆಯ ದಿನ ಒಳ್ಳೆಯ ಮಳೆ, ಬೆಳೆಗೆ, ನೆಮ್ಮದಿಯ ಬದುಕಿಗೆ ಜನ ಪ್ರಾರ್ಥಿಸುತ್ತಿದ್ದರೆ, ಕರಾವಳಿಯ ಸ್ವಯಂ ಘೋಷಿತ ಧರ್ಮ ರಕ್ಷಕರು ಶೂದ್ರ ಯುವಕರ ಕೈಗೆ ತ್ರಿಶೂಲ, ತಲವಾರುಗಳನ್ನು ನೀಡಿ ಅದನ್ನು ಸ್ವಯಂ ರಕ್ಷಣೆಗೆಂದು ಹೇಳಿಕೊಳ್ಳುತ್ತಿದ್ದಾರೆ. ಇದು ಧಾರ್ಮಿಕ ಕಾರ್ಯಕ್ರಮ ಎಂದು ಅವರು ಹೇಳಿಕೊಳ್ಳಬಹುದು. ಆದರೆ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರ ಸರ್ವೋಚ್ಚ ನಾಯಕ ಜಗದೀಶ ಕಾರಂತರು ಸಮಾಜವಾದ ಮತ್ತು ಸೆಕ್ಯುಲರಿಸಂಗಳನ್ನು ಸಮಾಧಿ ಮಾಡಿದ್ದೇವೆ ಇನ್ನು ಮುಂದೆ ನೋಡಿ ಎಂದಿದ್ದಾರೆ.

ಇನ್ನು ಅವರ ಮುಂದಿನ ಗುರಿ ಯಾವುದೆಂಬುದನ್ನು ಹುಡುಕಲು ಸಂಶೋಧನೆಯ ಅಗತ್ಯವಿಲ್ಲ. ಅವರ ಮುಂದಿನ ಸಹಬಾಳ್ವೆಯ ಬಹುತ್ವ ಭಾರತ ಮತ್ತು ಬಾಬಾಸಾಹೇಬರ ಸಂವಿಧಾನ ದಲಿತ, ದಮನಿತ ಸಮುದಾಯಗಳಿಗೆ ಇರುವ ಮೀಸಲು ವ್ಯವಸ್ಥೆ ಅವರು ಸಮಾಧಿ ಮಾಡಲು ಹೊರಟ ಮುಂದಿನ ಗುರಿಗಳು ಎಂದು ಪ್ರತ್ಯೇಕಿಸಿ ಹೇಳಬೇಕಿಲ್ಲ.

ಈ ತ್ರಿಶೂಲ ದೀಕ್ಷೆಯ ದಿನವೇ ನಾಗಪುರದಲ್ಲಿ ಇವರ ಸರ ಸಂಘಚಾಲಕ ಮೋಹನ ಭಾಗವತರು ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸಲ್ಮಾನರು ಮತ್ತು ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಮ್ಮದೇ ಅಂಕಿ-ಅಂಶಗಳನ್ನು ನೀಡಿದ್ದರು. ಬಹುಸಂಖ್ಯಾತ ಹಿಂದೂಗಳಿಗೂ ಬಿಸಿ ಮುಟ್ಟಿಸಿರುವ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ, ಹಸಿವಿನ ಸೂಚ್ಯಂಕದಲ್ಲಿ ಹಿನ್ನಡೆ, ಸಾರ್ವಜನಿಕ ಸೊತ್ತಿನ ಮಾರಾಟದ ಬಗ್ಗೆ ಭಾಗವತ ರು ಮಾತಾಡಿಲ್ಲ. ಅವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅದೇ ಹಳೆಯ ಜನಸಂಖ್ಯಾ ನೀತಿಯ ಪುನಾರಚನೆಯ ಪುರಾಣ ಹೇಳಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ, ಕಾರವಾರ ಸೇರಿದಂತೆ ಕರಾವಳಿಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಒಂದು ಕಾಲದಲ್ಲಿ ವಾಣಿಜ್ಯ, ವ್ಯವಹಾರಕ್ಕೆ ಹೆಸರಾಗಿದ್ದ ಕಡಲ ತೀರದ ಬಂದರು ಸೌಕರ್ಯ ಹೊಂದಿರುವ ಮಂಗಳೂರು ಈಗ ವುುಂಚಿನಂತಿಲ್ಲ. ಗಾಂಜಾ, ಅಫೀಮುಗಳ ಹಾವಳಿ ಅಲ್ಲಿನ ನೆ್ಮುದಿಯ ಬದುಕನ್ನು ಕಿತ್ತುಕೊಂಡಿದೆ.

ನಿರುದ್ಯೋಗದಿಂದ ಬೀದಿಗೆ ಬಿದ್ದ ಯುವಕರ ಮೆದುಳಿಗೆ ಮತಾಂಧತೆಯ ವಿಷ ಲೇಪನ ಮಾಡಿ ದಶಕಗಳೇ ಗತಿಸಿದವು. ಈಗ ಅವರ ಕೈಗೆ ತಲವಾರು, ತ್ರಿಶೂಲಗಳನ್ನು ಕೊಟ್ಟು ಅದಕ್ಕೆ ದೀಕ್ಷೆ ಎಂದು ಕಾರ್ಯಕ್ರಮ ನಡೆಸುವ ಉದ್ದೇಶವೇನು?

ಈ ತಲವಾರು, ತ್ರಿಶೂಲಗಳನ್ನು ಯಾರ ವಿರುದ್ಧ ಬಳಸಲು ನೀಡಲಾಗಿದೆ? ದಲಿತರು, ಶೂದ್ರರನ್ನು ಹಿಂದೂಗಳೆಂದು ಹುರಿದುಂಬಿಸುವ ಶಕ್ತಿಗಳು ಅದೇ ದಲಿತರ ಮೇಲೆ ದೌರ್ಜನ್ಯ ಹಿಂಸಾಚಾರ ನಡೆಸಿದಾಗ ಏಕೆ ಮೌನವಾಗಿರುತ್ತವೆ? ಖೈರ್ಲಾಂಜಯಲ್ಲಿ ದಲಿತ  ತಾಯಿ ಮಗಳನ್ನು ಬೆತ್ತಲೆ ಮಾಡಿ ನಡು ರಸ್ತೆಯಲ್ಲಿ ಅತ್ಯಾಚಾರ ಮಾಡಿ ಕೊಂದು ಹೊಳೆಗೆ ಬಿಸಾಡಿದಾಗ ಇವರ ತ್ರಿಶೂಲ, ತಲವಾರುಗಳು ಎಲ್ಲಿದ್ದವು. ತೀರ ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರಗಳಲ್ಲಿ ದಲಿತ ಹೆಣ್ಣು ಮಗಳ ಮನೆ ಹೊಕ್ಕು ಅತ್ಯಾಚಾರ ಮಾಡಲು ಯತ್ನಿಸಿ ಆಕೆ ಪ್ರತಿಭಟಿಸಿದಾಗ ಸೀಮೆ ಎಣ್ಣೆ ಸುರಿದು ಜೀವಂತ ಸುಟ್ಟು ಹಾಕಿದರಲ್ಲ ಆವಾಗ ಎಲ್ಲಿದ್ದವು ಈ ತಲವಾರು, ತ್ರಿಶೂಲಗಳು? ಆಕೆ ಹಿಂದೂ ಹೆಣ್ಣು ಮಗಳಲ್ಲವೇ?

ಈಗ ಒಮ್ಮೆಲೆ ತಲವಾರು, ತ್ರಿಶೂಲಗಳ ಪ್ರಹಸನವೇಕೆ? ಇದಕ್ಕೆ ಉತ್ತರ ಸ್ಪಷ್ಟವಿದೆ. ಕಳೆದ ಏಳು ವರ್ಷಗಳ ದುರಾಡಳಿತದಿಂದ ಭಾರತ ವಿನಾಶದತ್ತ ದಾಪುಗಾಲಿಡುತ್ತಿದೆ. ಅಂತರ್‌ರಾಷ್ಟ್ರೀಯವಾಗಿ ದೇಶದ ಘನತೆಗೆ ಧಕ್ಕೆ ಬಂದಿದೆ. ಕೊರೋನ ಮೊದಲ ಮತ್ತು ಎರಡನೇ ಅಲೆ ಬಂದಾಗ ಲಕ್ಷಾಂತರ ಜನ   ತಮ್ಮ ಊರನ್ನು ಸೇರಲು ಸಾವಿರಾರು ಕಿ.ಮೀ. ನಡೆದರು. ಅವರಲ್ಲಿ ಅನೇಕರು ಬೀದಿ ಹೆಣವಾದರು. ಹೀಗೆ ನಡೆದು ನಡೆದು ಹೈರಾಣಾದವರಲ್ಲಿ, ಹೆಣವಾದವರಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ಅವರ ನೆರವಿಗೆ ಒಕ್ಕೂಟ ಸರಕಾರದ ನೇತಾರ ಮಾತು ಬಿಟ್ಟರೆ ಬೇರೇನನ್ನೂ ನೀಡಲಿಲ್ಲ. ಈಗ ತ್ರಿಶೂಲ, ತಲವಾರು ಝಳಪಿಸುವವರು ಆಗ ಈ ಬಡಪಾಯಿ ಹಿಂದೂಗಳ ನೆರವಿಗೆ ಏಕೆ ಬರಲಿಲ್ಲ?

ಆದರೆ ಈ ಭಾರತದ ದುರಂತವೆಂದರೆ ಜಾತಿ, ಮತದ ಮತ್ತೇರಿಸಿಕೊಂಡರೆ ಮುಗಿಯಿತು ನಮ್ಮ ಜನರಿಗೆ ಬೆಲೆ ಏರಿಕೆಯ ಬಿಸಿ ಮೈಯನ್ನೆಲ್ಲ ಸುಡುತ್ತಿದ್ದರೂ ಜನಾಂಗ ದ್ವೇಷದ ಅನಸ್ತೆಸಿಯಾ ಇವರನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ. ಐವತ್ತು ವರ್ಷಗಳ ಹಿಂದೆ ಹೊಟೇಲ್‌ನಲ್ಲಿ ಒಂದು ಕಪ್ ಚಹದ ಬೆಲೆ ಐದು ಪೈಸೆ ಹೆಚ್ಚಾದರೆ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದವು.

ಉಳ್ಳಾಗಡ್ಡಿ ಧಾರಣೆ ಹೆಚ್ಚಾದಾಗ ಸರಕಾರಗಳೇ ಉರುಳಿದ ಉದಾಹರಣೆಗಳು ಇಲ್ಲಿವೆ. ಎಪ್ಪತ್ತರ ದಶಕದಲ್ಲಿ ಆಹಾರ ಧಾನ್ಯಗಳ ಬೆಲೆ ಹೆಚ್ಚಾದಾಗ ಬಿಜಾಪುರ ಮತ್ತು ಹುಬ್ಬಳ್ಳಿಗಳಲ್ಲಿ ಕಮ್ಯುನಿಸ್ಟ್ ನಾಯಕರಾಗಿದ್ದ ಎನ್.ಕೆ.ಉಪಾಧ್ಯಾಯ ಮತ್ತು ಏ.ಜೆ.ಮುಧೋಳರು ಜನರನ್ನು ಅದರಲ್ಲೂ ಯುವಕ ರನ್ನು ಕಟ್ಟಿಕೊಂಡು ದೊಡ್ಡ ವ್ಯಾಪಾರಸ್ಥರ ಗೋದಾಮುಗಳಲ್ಲಿರುವ ಅಕ್ರಮ ದಾಸ್ತಾನು ಹೊರಗೆಳೆದು ಬಡವರಿಗೆ ಹಂಚಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.

ನಾನು ಅಂಥ ಚಳವಳಿಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದೇನೆ. ಆದರೆ ಈಗ 2021ರಲ್ಲಿ ಸುಮಾರು ಅರುವತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿವೆ. ಗ್ಯಾಸ್ ಸಿಲಿಂಡರ್ ಏಳು ವರ್ಷಗಳ ಹಿಂದೆ 400 ರೂ.ಗಿಂತ ಕಡಿಮೆ ಇದ್ದುದು ಈಗ 900 ರೂ. ದಾಟಿದೆ. ಅಡುಗೆಗೆ ಉಪಯೋಗಿಸುವ ಎಣ್ಣೆಯ ಬೆಲೆ, ಜೋಳ, ಅಕ್ಕಿ, ಗೋಧಿ, ರಾಗಿ , ಬೆಲ್ಲ, ಸಕ್ಕರೆ, ಹೀಗೆ ಎಲ್ಲ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಮನೆ ಕಟ್ಟಲು ಬೇಕಾಗುವ ಸ್ಟೀಲ್, ಸಿವೆುಂಟ್, ಮರಳು, ಎಲ್ಲ ತುಟ್ಟಿಯಾಗಿದೆ.

ಆದರೆ ಇದಕ್ಕೆ ತಕ್ಕಂತೆ ದುಡಿಯುವ ಜನರ ಸಂಬಳ ಹೆಚ್ಚಾಗಿಲ್ಲ, ಬದಲಾಗಿ ಕಡಿತವಾಗಿದೆ. ಅನೇಕ ಸಣ್ಣಪುಟ್ಟ ಉದ್ದಿಮೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಮಾಯಕ ಯುವಕರ ಕೈಗೆ ತ್ರಿಶೂಲ, ತಲವಾರುಗಳನ್ನು ನೀಡಿ ಹಿಂಸೆಗೆ ಪ್ರಚೋದಿಸುವವರು ಎಂದೂ ಬೆಲೆ ಏರಿಕೆ, ನಿರುದ್ಯೋಗ, ಹಸಿವು, ಬಡತನದ ಬಗ್ಗೆ ಮಾತಾಡುವುದಿಲ್ಲ. ಅವರಿಗೆ ತುರ್ತಾಗಿ ತಮ್ಮ ಜಾತಿ ಶ್ರೇಷ್ಠತೆಯ ಮನುವಾದಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕಾಗಿದೆ. ಅದಕ್ಕಾಗಿ ಸಮಾಜವಾದ ಮತ್ತು ಸೆಕ್ಯುಲರಿಸಂಗಳನ್ನು ಮುಗಿಸುವ ಜೊತೆ ಸಕಲರಿಗೆ ಸಮಾನ ಅವಕಾಶವಿರುವ ಸಂವಿಧಾನದ ಮೇಲೆ ಗೋರಿ ಕಟ್ಟಲು ಹೊರಟಿದ್ದಾರೆ.

ಮಧ್ಯಮ ವರ್ಗಕ್ಕೆ ಈ ಬಗ್ಗೆ ಅಸಮಾಧಾನ ಇಲ್ಲವೆಂದಲ್ಲ ಅದು ಗೊಣಗಾಟಕ್ಕೆ ಮಾತ್ರ ಸೀಮಿತವಾಗಿ ಉಳಿದು ಬಿಡುತ್ತದೆ. ಹೀಗೆ ಗೊಣಗಾಡುವ ಜನರೇ ಚುನಾವಣೆ ಬಂದಾಗ ಇದನ್ನೆಲ್ಲ ಮರೆತು ಮತ್ತೆ ಅವರಿಗೆ ಮತ ಹಾಕುತ್ತಾರೆ. ಜಾತಿ ಮತದ ಕಣ್ಣು ಪಟ್ಟಿ ಅವರನ್ನು ಅಂಧರನ್ನಾಗಿ ಮಾಡಿದೆ.

ಮಂಗಳೂರು, ಉಡುಪಿಗಳಲ್ಲಾಗಲಿ ಎಲ್ಲಾದರೂ ಆಗಲಿ ತಲವಾರು, ತ್ರಿಶೂಲಗಳನ್ನು ಹಂಚುವುದರಿಂದ ದೀಕ್ಷೆ ತೊಡುವುದರಿಂದ ಅಕ್ಕಿ, ಬೇಳೆ, ಪೆಟ್ರೋಲ್, ಡೀಸೆಲ್ ಬೆಲೆಗಳಲಿ್ಲನ ಒಂದೇ ಒಂದು ಪೈಸೆಯೂ ಕಡಿಮೆಯಾಗುವುದಿಲ್ಲ. ಪ್ರಚೋದನಾಕಾರಿ ಮಾತುಗಳನ್ನು ಆಡಿ ಯುವಕರನ್ನು ಹಿಂಸೆಗೆ ಪ್ರಚೋದಿಸುವವರಾಗಲಿ, ಅವರ ಮಕ್ಕಳಾಗಲಿ ಒಂದೇ ಒಂದು ದಿನ ಬೀದಿಗೆ ಬಂದು ಹೊಡೆದಾಡಿ ಜೈಲಿಗೆ ಹೋದ ಉದಾಹರಣೆಗಳಿಲ್ಲ.

ಜೈಲಿಗೆ ಹೋಗುವವರು, ಕೇಸು ಹಾಕಿಸಿಕೊಳ್ಳುವವರು ಬಡವರ, ಶೂದ್ರರ, ದುಡಿಯುವ ಜನರ ಮಕ್ಕಳು. ಭಾಷಣಕಾರರ ಮಕ್ಕಳು ಅಮೆರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲೇ ಪೌರತ್ವ ಪಡೆದು ಕೋಟಿ ಕೋಟಿ ಗಳಿಸುವ ಉದ್ಯೋಗ ಮಾಡುತ್ತಾರೆ. ವಾಶಿಂಗ್ಟನ್, ನ್ಯೂಯಾರ್ಕ್‌ಗಳಲ್ಲೇ ಕುಳಿತು ಆನ್‌ಲೈನ್‌ನಲ್ಲಿ ರಾಷ್ಟ್ರವಾದದ ಬಿಟ್ಟಿ ಉಪದೇಶವನ್ನು ನೀಡುತ್ತಾರೆ.

ಒಂದು ಕಾಲದಲ್ಲಿ ಮಂಗಳೂರಿನವರೆಂದರೆ ನಾವು ಬೆರಗಾಗಿ ನೋಡುತ್ತಿದ್ದೆವು. ಕರ್ನಾಟಕದ ತುಂಬಾ ಸುತ್ತುತ್ತಿದ್ದ, ಬರೆಯುತ್ತಿದ್ದ ಶಿವರಾಮ ಕಾರಂತರು, ಅವರಿಗಿಂತ ಅವರ ಅಣ್ಣ ಕೋ.ಲ. ಕಾರಂತರು ಅರುವತ್ತು ವರ್ಷಗಳ ಹಿಂದೆಯೇ ವಿಚಾರವಾದದ ಜ್ಯೋತಿ ಹಿಡಿದು ನಿಂತವರು, ಕೋಮುವಾದಿ ಪರಿವಾರದ ವಿರುದ್ಧ ಧ್ವನಿಯೆತ್ತಿದವರು. ನಮ್ಮ ಊರಿಗೆ ಬಂದು ಹೊಟೇಲ್ ರುಚಿ ಹಚ್ಚಿದ ದಕ್ಷಿಣ ಕನ್ನಡಿಗರು, ಬ್ಯಾಂಕುಗಳನ್ನು ಪರಿಚಯಿಸಿದ ವಿಜಯಾ ಬ್ಯಾಂಕಿನ ಅತ್ತಾವರ ಬಾಲಕೃಷ್ಣ ಶೆಟ್ಟರು.

ಕೆನರಾ ಬ್ಯಾಂಕಿನ ಅಮ್ಮೆಂಬಳ ಸುಬ್ಬರಾವ್, ಸಿಂಡಿಕೇಟ್ ಬ್ಯಾಂಕ್ ಕಟ್ಟಿದ ಟಿ.ಎಂ.ಎ. ಪೈ ಇವರಲ್ಲಿ ಅನೇಕರು ಉತ್ತರ ಕರ್ನಾಟಕದ ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಕಲಬುರಗಿಗಳಿಗೆ ಬಂದು ತಮ್ಮ ಬ್ಯಾಂಕುಗಳ ಶಾಖೆಗಳನ್ನು ಆರಂಭಿಸಿದಾಗ ಮಂಗಳೂರಿನ ಬಗ್ಗೆ ಹೆಮ್ಮೆ ಪಟ್ಟವರು ನಾವು.

ಕಾರ್ಪೊರೇಷನ್ ಬ್ಯಾಂಕ್ ಕಟ್ಟಿದ ಹಾಜಿ ಅಬ್ದುಲ್ಲಾ ಕಾಶಿಮ್ ಸಾಹೇಬರು ಕಷ್ಟ ಕಾಲದಲ್ಲಿ ಜನಸಾಮಾನ್ಯರ ನೆರವಿಗೆ ಬಂದುದು, ಹಡಗಿನಲ್ಲಿ ಅಕ್ಕಿ, ಮತ್ತಿತರ ಆಹಾರ ಧಾನ್ಯ ತರಿಸಿ ಹಂಚಿದ್ದು, ಉಡುಪಿ ಮಠಗಳಿಗೆ ನೆರವಾಗಿದ್ದನ್ನು ಹೇಗೆ ಮರೆಯಲು ಸಾಧ್ಯ. ಮಂಗಳೂರು, ಕಾಸರಗೋಡು ಅಂದರೆ ನಮಗೆ ಐಕ್ಯತೆಯ ಮಂತ್ರ ಹೇಳಿದ ಕಯ್ಯಿರರು, ಇದಿನಬ್ಬರು, ನಮ್ಮ ಬಿಜಾಪುರದಲ್ಲಿ ಎಪ್ಪತ್ತು ವರ್ಷಗಳ ಹಿಂದೆ ಬಂದು ಕಮ್ಯುನಿಸ್ಟ್ ಪಾರ್ಟಿ ಕಟ್ಟಿ ಶ್ರಮಜೀವಿಗಳನ್ನು ಸಂಘಟಿಸಿದ ನಂದಿಕೂರು ಕೃಷ್ಣ ಉಪಾಧ್ಯಾಯರು ಮತ್ತು ನಮ್ಮ ಭಾಗಕ್ಕೆ ಆಗಾಗ ಬಂದು ಭಾಷಣ ಮಾಡಿ ಜನ ಜಾಗೃತಿ ಮೂಡಿಸುತ್ತಿದ್ದ ಕಮ್ಯುನಿಸ್ಟ್ ಸಂಸದ, ಶಾಸಕರಾಗಿದ್ದ ಬಿ.ವಿ.ಕಕ್ಕಿಲ್ಲಾಯರು, ಪಿ.ರಾಮಚಂದ್ರರಾವ್, ಹುಬ್ಬಳ್ಳಿಯಲ್ಲಿ ನಲವತ್ತರ ದಶಕದಲ್ಲಿ ಭೂಗತರಾಗಿ ಕಮ್ಯುನಿಸ್ಟ್ ಚಳವಳಿ ಸಂಘಟಿಸಿದ, ಜನಶಕ್ತಿ ವಾರಪತ್ರಿಕೆ ಸಂಪಾದಿಸುತ್ತಿದ್ದ ಕುಳಕುಂದ ಶಿವರಾಯರು(ನಿರಂಜನ) ನೆನಪಿಗೆ ಬರುತ್ತಾರೆ. ಇಂಥ ಮಹಾ ಚೇತನ ಸ್ವರೂಪಿಗಳನ್ನು ನಾಡಿಗೆ ಕೊಟ್ಟ ಮಂಗಳೂರಿನಲ್ಲಿ ತಲವಾರು ಝಳಪಿಸುವುದು, ಪ್ರಚೋದನಾಕಾರಿ ಮಾತನ್ನಾಡುವುದನ್ನು ಓದಿ ದಿಗಿಲು ಗೊಂಡೆ.

ಪ್ರಕೃತಿ ನಿಯಮವೇ ಹಾಗಿದೆಯೇನೋ ಜ್ಯೋತಿಬಾ ಫುಲೆ, ಶಾಹು ಮಹಾರಾಜ, ಅಂಬೇಡ್ಕರ್, ಶ್ರೀ ಪಾದ ಅಮ್ರತ ಡಾಂಗೆಯವರನ್ನು ಭಾರತಕ್ಕೆ ನೀಡಿದ ಮಹಾರಾಷ್ಟ್ರ, ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆಗಳನ್ನು ನೀಡಿತು. ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲರನ್ನು ನೀಡಿದ ಗುಜರಾತ್ ಈಗ ಎಂತೆಂಥ ಮಹಾತ್ಮ್ಮಾರನ್ನು ನೀಡಿದೆ ಎಂಬುದು ಎಲ್ಲರಿಗೆ ಗೊತ್ತಿದೆ. ಈಗ ನಮಗೆ ಬೇಕಾಗಿರುವುದು ಪರಸ್ಪರ ಪ್ರೀತಿಸುವ ಆಧುನಿಕ ಹೊಸ ಭಾರತ. ಎಲ್ಲರ ಕೈಗೆ ಉದ್ಯೋಗ, ಎಲ್ಲರಿಗೂ ಮನೆ, ಎಲ್ಲರಿಗೂ ಊಟ, ಎಲ್ಲರೂ ಖುಷಿಯಿಂದ ಬದುಕುವ ಭಾರತ. ತ್ರಿಶೂಲ, ತಲವಾರು, ದೊಣ್ಣೆ, ಲಾಠಿಗಳಿಂದ ಅಂಥ ಭಾರತವನ್ನು ನಿರ್ಮಾಣ ಮಾಡುವುದು ಸಾಧ್ಯವಿಲ್ಲ.

ಒಬ್ಬರನ್ನು ಇನ್ನೊಬ್ಬರು ಕೊಂದು, ಕೊಚ್ಚಿ ಹಾಕಿ ಯಾವುದೇ ಧರ್ಮನ್ನು ಉಳಿಸಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಪಾಯದಲ್ಲಿ ಇರುವುದೆಂದು ಭ್ರಮಾತ್ಮಕ ಭೀತಿಯನ್ನು ಉಂಟು ಮಾಡುವವರಿಗೆ ತಮ್ಮದೇ ಆದ ರಾಜಕೀಯ ಅಜೆಂಡಾ ಇರುತ್ತದೆ. ಇಲ್ಲವಾದರೆ ತ್ರಿಶೂಲ, ತಲವಾರು ದೀಕ್ಷಾ ಕಾರ್ಯಕ್ರಮದಲ್ಲಿ ಮಾತಾಡಿದ ಭಾಷಣಕಾರರು ಕಳೆದ ಒಂದು ವರ್ಷದಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ವಿಷ ಕಕ್ಕುತ್ತಿರಲಿಲ್ಲ.

ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳು ಕಟ್ಟಲು ಹೊರಟಿರುವುದು ಹಿಟ್ಲರ್, ಮುಸ್ಸೋಲಿನಿ, ಗೋಳ್ವಾಲ್ಕರ್, ಸಾವರ್ಕರ್, ಕಲ್ಪನೆಯ ಮನುವ್ಯಾಧಿ ರಾಷ್ಟ್ರವನ್ನು. ಆದರೆ ಇದು ಬುದ್ಧ, ಮಹಾವೀರ, ಬಸವಣ್ಣ, ಕಬೀರ, ತುಕಾರಾಮ, ಅಶೋಕ, ಶಿಶುನಾಳ ಶರೀಫ, ಕನಕದಾಸರ ಭಾರತವಾಗಿ ಉಳಿದರೆ ಮಾತ್ರ ಸುರಕ್ಷಿತವಾಗಿ ಉಳಿಯುತ್ತದೆ. ದ್ವೇಷದ ತಲವಾರುಗಳ ಬದಲಾಗಿ ಪ್ರೀತಿ, ಅಂತಃಕರಣದ ಹೂವುಗಳನ್ನು ಹಂಚೋಣ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News