ಅಫ್ಘಾನ್‌ನಲ್ಲಿ ಅಮೆರಿಕ ಪ್ರತಿನಿಧಿಯಾಗಿದ್ದ ಖಲೀಲ್‌ಝಾದ್ ರಾಜೀನಾಮೆ

Update: 2021-10-19 03:58 GMT
ಖಲೀಲ್‌ಝಾದ್ (Photo: Twitter@US4AfghanPeace)

ವಾಷಿಂಗ್ಟನ್, ಅ.19: ಅಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯ ಅಸ್ತವ್ಯಸ್ತತೆ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರತಿನಿಧಿಯಾಗಿದ್ದ ಖಲೀಲ್‌ಝಾದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಹುದ್ದೆಗೆ ಥಾಮಸ್ ವೆಸ್ಟ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂತೋನಿ ಬ್ಲಿಂಕೆನ್ ಪ್ರಕಟಿಸಿದ್ದಾರೆ.

"ಜೋ ಬೈಡೆನ್ ಅಮೆರಿಕದ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ವೆಸ್ಟ್, ರಾಷ್ಟ್ರೀಯ ಭದ್ರತಾ ತಂಡದಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ನೂತನ ಹೊಣೆಗಾರಿಕೆಯಲ್ಲಿ ವೆಸ್ಟ್, ಅಫ್ಘಾನಿಸ್ತಾನ ಜತೆಗಿನ ರಾಜತಾಂತ್ರಿಕ ಪ್ರಯತ್ನಗಳ ನೇತೃತ್ವ ವಹಿಸುವರು. ದಕ್ಷಿಣ ಮತ್ತು ಕೇಂದ್ರ ಏಶ್ಯ ವ್ಯವಹಾರಗಳ ಬ್ಯೂರೊಗಳ ಕಾರ್ಯದರ್ಶಿ ಹಾಗೂ ಸಹಾಯಕ ಕಾರ್ಯದರ್ಶಿಗೆ ಸಲಹೆ ನೀಡುವ ಜತೆಗೆ, ಅಫ್ಘಾನಿಸ್ತಾನದಲ್ಲಿನ ಅಮೆರಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ದೋಹಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಜತೆ ಸಮನ್ವಯ ಸಾಧಿಸುವರು. ಖಲೀಲ್‌ಝಾದ್ ಅವರ ದಶಕಗಳ ಸೇವೆಗೆ ಬ್ಲಿಂಕೆನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇಸ್ಲಾಮಿಕ್ ಗುಂಪು ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ದೋಹಾ ಒಪ್ಪಂದ ಮಾತುಕತೆಗಳ ನೇತೃತ್ವವನ್ನು ಖಲೀಲ್‌ಝಾದ್ ವಹಿಸಿದ್ದರು. ಈ ಒಪ್ಪಂದದ ಅನ್ವಯ 2021ರ ಮೇ ತಿಂಗಳ ಒಳಗಾಗಿ ಅಮೆರಿಕದ ಸೇನೆಯನ್ನು ಅಫ್ಘಾನಿಸ್ತಾನದಿಂದ ಸಂಪೂರ್ಣ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News