ಬೆಂಗಳೂರು: ನಗರದಲ್ಲಿ 300ಕ್ಕೂ ಅಧಿಕ ಶಿಥಿಲ ಕಟ್ಟಡಗಳು; ತಿಂಗಳ ಅಂತ್ಯದೊಳಗೆ ವಲಯವಾರು ವರದಿ ಬಿಡುಗಡೆ

Update: 2021-10-19 12:54 GMT
ಸಾಂದರ್ಭಿಕ ಚಿತ್ರ (Photo: Twitter)

ಬೆಂಗಳೂರು: ನಗರದಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹೊಸ ಕಟ್ಟಡಗಳೂ ಸೇರಿದಂತೆ ಶಿಥಿಲಾವಸ್ಥೆಯ ಕಟ್ಟಡಗಳು ಒಂದರ ಮೇಲೊಂದರಂತೆ ಕುಸಿಯುತ್ತಿವೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕಳೆದ 15 ದಿನಗಳಿಂದ ಶಿಥಿಲಾವಸ್ಥೆಯ ಕಟ್ಟಡಗಳನ್ನು ಸಮೀಕ್ಷೆ ಮಾಡಲು ಆರಂಭಿಸಿದೆ.

ಈಗಾಗಲೇ ಪಾಲಿಕೆಯ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ 300ಕ್ಕೂ ಅಧಿಕ ಕಟ್ಟಡಗಳನ್ನು ಪ್ರಾರಂಭಿಕ ಸಮೀಕ್ಷೆಯಲ್ಲಿ ಗುರುತಿಸಿದೆ. ತಿಂಗಳ ಅಂತ್ಯದೊಳಗೆ ಶಿಥಿಲಾವಸ್ಥೆಯ ಕಟ್ಟಡಗಳ ವಲಯವಾರು ವರದಿಯನ್ನು ಸಹ ಬಿಡುಗಡೆ ಮಾಡುವುದಾಗಿ ಬಿಬಿಎಂಪಿ ಸ್ಪಷ್ಟಪಡಿಸಿದೆ.

ಅಂತಮ ವರದಿ ಸಿದ್ಧಪಡಿಸಿದ ಬಳಿಕ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಲಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಬಳಿಕ ಮಾಲಕರಿಂದ ಬಂದ ತಕರಾರುಗಳನ್ನು ಪರಿಶೀಲನೆ ಮಾಡಿ, ಕ್ರಮವಹಿಸಲಾಗುವುದು. ಕಟ್ಟಡಗಳು ಸಂಪೂರ್ಣವಾಗಿ ಬೀಳುವ ಹಂತದಲ್ಲಿದ್ದರೆ, ಕೂಡಲೇ ಅವನ್ನು ನೆಲಸಮ ಮಾಡಲಾಗುವುದು. ವರದಿಯಲ್ಲಿ ಬಿಬಿಎಂಪಿ ಕಟ್ಟಡವಾಗಲೀ ಅಥವಾ ಸರಕಾರದ ಇತರೆ ಕಟ್ಟಡವಾಗಲೀ ಬೀಳುವ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದರೆ, ಅಂತಹ ಕಟ್ಟಡಗಳನ್ನೂ ನೆಲಸಮ ಮಾಡಲಾಗುವುದು. ಹಾಗೆಯೇ ಹೈ-ರೈಸ್ ಕಟ್ಟಡಗಳ ಕುರಿತು ಪ್ರತ್ಯೇಕವಾಗಿ ಯಾವುದೇ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಬಿಬಿಎಂಪಿ ಕಮಲಾನಗರದಲ್ಲಿ ಬೀಳುವ ಹಂತದಲ್ಲಿದ್ದ ಮನೆ ನೆಲಸಮಗೊಳಿಸುವಾಗ ಪಕ್ಕದ ಮನೆಯನ್ನು ಅನಧಿಕೃತವಾಗಿ ತೆರವುಗೊಳಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಕುರಿತು ಪರಿಶೀಲನೆ ನಡೆಯಲಾಗುತ್ತಿದ್ದು, ವಲಯದ ಜಂಟಿ ಕಮಿಷನರ್‍ಗೆ ಕ್ರಮವಹಿಸುವಂತೆ ತಿಳಿಸಲಾಗಿದೆ. ಇದಲ್ಲದೇ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳ ಅನ್ವಯ ಅರ್ಹ ಸಂತ್ರಸ್ಥ ಫಲಾನುಭವಿಗಳಿಗೆ ಸೂಕ್ತ ಪರಿಹಾರವನ್ನು ಸರಕಾರದ ಸೂಚನೆಯಂತೆ ನೀಡಲಾಗುತ್ತದೆ ಎಂದು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News