ಉತ್ತರಾಖಂಡ: ನಿರಂತರ ಮಳೆ, ಪ್ರವಾಹದಲ್ಲಿ 16 ಮಂದಿ ಮೃತ್ಯು; 22 ಯಾತ್ರಿಕರ ರಕ್ಷಣೆ

Update: 2021-10-19 15:34 GMT

ಡೆಹ್ರಾಡೂನ್, ಅ.19: ನಿರಂತರ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರಾಖಂಡದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಪ್ರವಾಹ ಹಾಗೂ ಭೂಕುಸಿತದಡಿ ಸಿಲುಕಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಸಂದರ್ಭ ನೆರೆನೀರಿನಲ್ಲಿ ಸಿಲುಕಿ ಅಪಾಯದಲ್ಲಿದ್ದ 22 ಯಾತ್ರಿಕರನ್ನು ವಿಪತ್ತು ನಿರ್ವಹಣಾ ತಂಡ ರಕ್ಷಿಸಿದೆ. ಚಂದ್ರಭಾಗ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ತಪೋವನ,

 ಲಕ್ಷ್ಮಣ್ ಜೂಲಾಕ್ಕೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ನೆರೆನೀರಿನಲ್ಲಿ ತೇಲಿ ಬಂದ ಕಸಕಡ್ಡಿ, ಮರದ ತುಂಡುಗಳು ಛಮೋಲಿ ಜಿಲ್ಲೆಯಲ್ಲಿ ಹಾದುಹೋಗುವ ಬದ್ರೀನಾಥ್ ರಾಷ್ಟ್ರೀಯ ಹೆದ್ದಾರಿಯ 7 ಕಡೆ ರಾಶಿಬಿದ್ದಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬದ್ರೀನಾಥ ಚಾರ್ಧಾಮ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು ಯಾತ್ರಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು, ಎತ್ತರದ ಸ್ಥಳಗಳಿಗೆ ಚಾರಣ, ಪರ್ವತಾರೋಹಣಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.

ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ವಿವರಿಸಲಾಗಿದೆ. ಹಲವು ಮನೆಗಳು, ಸೇತುವೆಗಳಿಗೆ, ಕೃಷಿಗೆ ವ್ಯಾಪಕ ಹಾನಿಯಾಗಿದ್ದು ಇದುವರೆಗೆ 16 ಮಂದಿ ಮೃತರಾಗಿದ್ದಾರೆ. ಸೇನೆಯ 3 ಹೆಲಿಕಾಪ್ಟರ್ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್, ಶಿಕ್ಷಣ ಸಚಿವ ಧನ್ಸಿಂಗ್ ರಾವತ್ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಮಂಗಳವಾರ ಮಳೆಹಾನಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು , ನದಿಗಳು ಉಕ್ಕೇರಿ ಹರಿಯುತ್ತಿವೆ. ಹಲವು ಕಟ್ಟಡಗಳು ಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ಆಕರ್ಷಕ ಪ್ರವಾಸೀ ತಾಣ ನೈನಿತಾಲ್ನಲ್ಲಿ ಮಂಗಳವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ 500 ಮಿಮೀಗೂ ಅಧಿಕ ದಾಖಲೆ ಮಳೆಯಾಗಿದ್ದು ಪ್ರಸಿದ್ಧ ನೈನಿತಾಲ್ ಸರೋವರ ತುಂಬಿ ತುಳುಕುತ್ತಿದೆ.

   
 ನೈನಿತಾಲ್ ಅನ್ನು ಸಂಪರ್ಕಿಸುವ ಮೂರೂ ರಸ್ತೆಗಳನ್ನು ಭೂಕುಸಿತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಮುಚ್ಚಲಾಗಿದೆ. ಮಂಗಳವಾರ ನೈನಿತಾಲ್ನ ಮುಕ್ತೇಶ್ವರ ಮತ್ತು ಖರೀನಾ ಪ್ರದೇಶದಲ್ಲಿ ಮನೆ ಕುಸಿತದಿಂದ 7 ಮಂದಿ ಸಾವನ್ನಪ್ಪಿದ್ದು , ಮತ್ತೊಂದು ಪ್ರಕರಣದಲ್ಲಿ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸಿದ್ಧ ಮಾಲ್ ರಸ್ತೆ ಹಾಗೂ ನೈನಾದೇವಿ ದೇವಳಕ್ಕೆ ನೆರೆನೀರು ನುಗ್ಗಿದ್ದು ಹಾಸ್ಟೆಲ್ ಒಂದು ಕುಸಿದಿದೆ. ಸೋಮವಾರ ಲ್ಯಾನ್ಸ್ಡೌನ್ ನಗರದ ಬಳಿ ಮರದಡಿ ನಿಂತಿದ್ದ ನೇಪಾಲದ 3 ಕಾರ್ಮಿಕರು ಏಕಾಏಕಿ ನುಗ್ಗಿಬಂದ ನೆರೆನೀರಿನಲ್ಲಿ ಕೊಚ್ಚಿಹೋಗಿದ್ದರು.

ಸೋಮವಾರ ಚಂಪಾವತ್ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕೊಚ್ಚಿಹೋಗಿದ್ದರೆ, ಮನೆ ಕುಸಿತದಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಉಧಾಮ್ ಸಿಂಗ್ ನಗರದ ನಾನಕ್ಸಾಗರ್ ಅಣೆಕಟ್ಟಿನ ಗೇಟುಗಳನ್ನು ತೆಗೆಯಲಾಗಿದೆ. ಇದರೊಂದಿಗೆ ಮಳೆ ಹಾಗೂ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ.

 ವಿಪತ್ತು ನಿರ್ವಹಣಾ ದಳದ ರಾಷ್ಟ್ರೀಯ ಮತ್ತು ರಾಜ್ಯದ ತಂಡಗಳು, ಸೇನೆಯ 3 ಹೆಲಿಕಾಪ್ಟರ್ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಹಲವೆಡೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಫೋನ್ , ಇಂಟರ್ನೆಟ್ ಸಂಪರ್ಕಕ್ಕೂ ತೊಂದರೆಯಾಗಿದೆ.

ಈ ಮಧ್ಯೆ, ರಾಜ್ಯದಲ್ಲಿ ಮಂಗಳವಾರದಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News