ಶಿಮ್ಲಾ | ಐಜಿಎಂಸಿ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಹಲ್ಲೆ ಆರೋಪ: ವೈದ್ಯರ ವಿರುದ್ಧ ಪ್ರತಿಭಟನೆ
Photo Credit : indiatoday.in
ಶಿಮ್ಲಾ: ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಐಜಿಎಂಸಿ)ಯಲ್ಲಿ ರೋಗಿಯೊಬ್ಬರ ಮೇಲೆ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ರವಿವಾರ ಕೇಳಿ ಬಂದಿದೆ. ಘಟನೆಯ ಬಳಿಕ ರೋಗಿಯ ಸಹಾಯಕರು ಆಸ್ಪತ್ರೆ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು.
ಶಿಮ್ಲಾ ಜಿಲ್ಲೆಯ ಕುಪ್ವಿ ಉಪವಿಭಾಗದ ಗ್ರಾಮವೊಂದರ ನಿವಾಸಿಯಾಗಿರುವ ರೋಗಿಯು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ತನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ರೋಗಿ, ಗೌರವದಿಂದ ಮಾತನಾಡುವಂತೆ ಕೇಳಿದಾಗ ವೈದ್ಯರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಘಟನೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದ್ದು, ಅವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ರೋಗಿಯ ಸಹಾಯಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿತ ವೈದ್ಯರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಅವರು ಘೋಷಣೆಗಳನ್ನು ಕೂಗಿದರು.
ಘಟನೆ ಕುರಿತು ಆಸ್ಪತ್ರೆ ಆಡಳಿತದಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.