ಇಂದು ಭಾರತಕ್ಕೆ ಆಸ್ಟ್ರೇಲಿಯ ವಿರುದ್ದ ಕೊನೆಯ ಅಭ್ಯಾಸ ಪಂದ್ಯ

Update: 2021-10-19 19:01 GMT

ದುಬೈ, ಅ. 19: ಭಾರತವು ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ ತನ್ನ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯವನ್ನು ಬುಧವಾರ ದುಬೈಯಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭಾರತವು ಮುಂದಿನ ಪಂದ್ಯಗಳಿಗಾಗಿ ತನ್ನ ಬ್ಯಾಟಿಂಗ್ ಸರದಿಯನ್ನು ಅಂತಿಮಗೊಳಿಸುವ ಪ್ರಯತ್ನಗಳನ್ನು ಮಾಡಬಹುದಾಗಿದೆ.

ಟ್ವೆಂಟಿ-20 ವಿಶ್ವಕಪ್‌ಗಾಗಿ ಭಾರತದ ಸಿದ್ಧತೆಗಳು ಈಗಾಗಲೇ ಸರಾಗವಾಗಿ ನಡೆದಿದೆ. ಸೋಮವಾರ ನಡೆದ ತನ್ನ ಪ್ರಥಮ ಅಭ್ಯಾಸ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.

ಭಾರತವು ಪ್ರಧಾನ ಸುತ್ತಿನ ತನ್ನ ಆರಂಭಿಕ ಪಂದ್ಯದಲ್ಲಿ ರವಿವಾರ ಪಾಕಿಸ್ತಾನವನ್ನು ಎದುರಿಸಲಿದೆ.

ಈ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಭಾರತೀಯ ಟಿ-20 ತಂಡದ ನಾಯಕತ್ವವನ್ನು ಕೊನೆಯ ಬಾರಿಗೆ ವಹಿಸಲಿದ್ದಾರೆ. ಅದೂ ಅಲ್ಲದೆ, ಪ್ರಧಾನ ಕೋಚ್ ರವಿ ಶಾಸ್ತ್ರಿಯ ಅವಧಿಯೂ ಈ ಪಂದ್ಯಾವಳಿಯೊಂದಿಗೆ ಮುಕ್ತಾಯಗೊಳ್ಳಲಿದೆ.

ಭಾರತದ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕಗಳನ್ನು ಈಗಾಗಲೇ ನಿರ್ಧರಿಸಲಾಗಿದೆ ಎಂಬುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಿದರೆ, ನಂಬರ್ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯೇ ಇಳಿಯಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 70 ರನ್‌ಗಳನ್ನು ಮಾಡಿರುವ ಇಶಾನ್ ಕಿಶನ್ ಮತ್ತು 29 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದಿರುವ ರಿಶಭ್ ಪಂತ್ ಗಮನ ಸೆಳೆದಿದ್ದಾರೆ.

ಪಂದ್ಯವು ದುಬೈಯಲ್ಲಿ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News