ವಾಲ್ಮೀಕಿ ಸಮುದಾಯದ ಶ್ರೇಯೋಭಿವೃದ್ಧಿಗೆ ಸರಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-20 07:36 GMT

ಬೆಂಗಳೂರು, ಅ.20: ವಾಲ್ಮೀಕಿ ಸಮುದಾಯದ ಶ್ರೇಯೋಭಿವೃದ್ಧಿಗೆ ನ್ಯಾಯ ಮತ್ತು ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತನೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ  ಅವರು ಇಂದು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡುತ್ತಿದ್ದರು.

21ನೇ ಶತಮಾನದಲ್ಲಿ ಈ ಜನಾಂಗವೂ ಕೂಡ ಎಲ್ಲರಂತೆ ಮುಂದೆ ಬರಬೇಕು. ವಿದ್ಯೆ, ಉದ್ಯೋಗ ಮುಂತಾದ ಎಲ್ಲ ಕ್ಷೇತ್ರದಲ್ಲಿ ಮುಂದುವರಿಯಬೇಕು. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಆಶೋತ್ತರಗಳ ಬಗ್ಗೆ ಸಮಾಜ ಜಾಗೃತವಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

 ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರರು. ವ್ಯಕ್ತಿಯಲ್ಲಿ ಬದಲಾವಣೆಯಾದರೆ ದೈವತ್ವದ ಹಂತವನ್ನು ತಲುಪಲು ಸಾಧ್ಯ ಎನ್ನುವುದನ್ನು ವಾಲ್ಮೀಕಿ ನಿರೂಪಿಸಿದ್ದಾರೆ ಎಂದರು.

ವಾಲ್ಮೀಕಿ ಸಮುದಾಯ ತನ್ನ ಸ್ವಾಭಿಮಾನದ ಬದುಕನ್ನು ಕಾಯಕದ  ಮೂಲಕ ನಡೆಸಿಕೊಂಡು ಬಂದಿದೆ. ದೇಶವನ್ನು ಕಟ್ಟಲು, ಕಾಯಲು ಸ್ವತಂತ್ರ ಹೋರಾಟದಲ್ಲಿ ಹಾಗೂ ನಮ್ಮ ಧರ್ಮದ ರಕ್ಷಣೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

ಏಕಲವ್ಯ, ಒನಕೆ ಓಬವ್ವ, ಸಿಂಧೂರ ಲಕ್ಷ್ಮಣ, ಹಲಗಲಿ ಬೇಡರು, ವಿಜಯನಗರ ರಕ್ಷಿಸಿದ  ಸುರಪುರ ರಾಜರು ಸೇರಿದಂತೆ ಪ್ರಮುಖರ ಪರಂಪರೆ ಇದೆ. ಇದನ್ನು ಅರ್ಥಮಾಡಿಕೊಂಡು ಅವರ ಇತಿಹಾಸ ಪರಂಪರೆಗೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News