ಕೋಮು ಸಾಮರಸ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಿಷ್ಠಗೊಳಿಸಬೇಕು: ಡಾ.ಮುಹಮ್ಮದ್ ಸಾದ್ ಬೆಳಗಾಮಿ

Update: 2021-10-20 14:43 GMT

ಬೆಂಗಳೂರು, ಅ.20: ಕಳೆದ ಹಲವು ವರ್ಷಗಳಿಂದ ಮುಸ್ಲಿಮರ ಪ್ರಾಣ, ಸೊತ್ತು, ಗೌರವ ಮತ್ತು ಅವರ ಧರ್ಮ, ವಿಶ್ವಾಸಗಳ ಮೇಲೆ ಆಗುತ್ತಿರುವ ಆಕ್ರಮಣ ಹಾಗೂ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ರೂಪಿಸಿದ ಕಾನೂನುಗಳ ಮೂಲಕ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನಗಳು ಕಳವಳಕಾರಿಯಾಗಿವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದುರಾದೃಷ್ಟವಶಾತ್ ಕಳೆದ ಹಲವು ವರ್ಷಗಳಿಂದ ಪೂರ್ವಯೋಜಿತ ಆಕ್ರಮಣ, ಪ್ರಚೋದನಾತ್ಮಕ, ದ್ವೇಷಯುತ ವಾತಾವರಣ ಅಸಾಮಾನ್ಯವಾಗಿ ಬೆಳೆದಿವೆ. ನ್ಯಾಯದಲ್ಲಿ ದೃಢವಾದ ನಂಬುಗೆವುಳ್ಳ ಜನರು ಮುಸ್ಲಿಮರು ಮತ್ತು ದುರ್ಬಲ ವರ್ಗಗಳ ಜತೆ ನಿಂತು ಅವರ ಹಕ್ಕುಗಳು ಕಸಿಯಲ್ಪಡುವುದನ್ನು ತಡೆಯುವುದರ ಮೂಲಕ ತಮ್ಮ ನೈತಿಕ ಮತ್ತು ಮಾನವೀಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದರು.

ಸರಕಾರದ ನೈಜ ಹೊಣೆಗಾರಿಕೆ ದೇಶದಲ್ಲಿ ನ್ಯಾಯ, ಶಾಂತಿ, ಸುರಕ್ಷತೆಯ ಸ್ಥಾಪನೆ ಮತ್ತು ಕಾನೂನಿನ ಮೇಲ್ಮೆಯನ್ನು ಖಾತರಿಪಡಿಸುವುದಾಗಿದೆ, ಬದಲಾಗಿ ಅಧಿಕಾರದ ಅಮಲಿನಲ್ಲಿ ಇದನ್ನು ಮರೆತು ದ್ವೇಷ, ವೈರತ್ವ ಹುಟ್ಟಿಸಿ ತನ್ನ ಅಧಿಕಾರವನ್ನು ಭದ್ರ ಪಡಿಸುವುದಲ್ಲವೆಂದು ಆಡಳಿತ ವರ್ಗವನ್ನು ಎಚ್ಚರಿಸ ಬಯಸುತ್ತೇವೆ. ಆದರೆ ಅದು ದೇಶದಲ್ಲಿ ದೌರ್ಜನ್ಯ, ಅತಿರೇಕ, ದ್ವೇಷ, ವೈರತ್ವ ಮತ್ತು ಅಶಾಂತಿಯನ್ನು ತಡೆಯದೆ ಜಗತ್ತಿನಾದ್ಯಂತ ದೇಶದ ಗೌರವ ಮತ್ತು ಉತ್ತಮ ಹೆಸರಿಗೆ ಕಳಂಕ ತರುತ್ತಿದೆ ಎಂದು ಮುಹಮ್ಮದ್ ಸಾದ್ ಬೆಳಗಾಮಿ ಹೇಳಿದರು.

ಬೆಲೆಯೇರಿಕೆಯ ಬಿಸಿ: ದೇಶದಲ್ಲಿ ನಿರಂತರವಾಗಿ ದಿನನಿತ್ಯ ಏರುತ್ತಿರುವ ಬೆಲೆಯೇರಿಕೆ ಬಗ್ಗೆ ನಮ್ಮ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತೇವೆ. ಕಳೆದ ಹಲವು ವರ್ಷಗಳಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ತಡೆಯುವಲ್ಲಿ ಸರಕಾರದ ವಿಫಲತೆ ಜನಸಾಮಾನ್ಯರ ವಿಶೇಷವಾಗಿ ಬಡಜನರ ದೈನಂದಿನ ಜೀವನವನ್ನು ದುಸ್ತರಗೊಳಿಸಿದೆ. ಕೇಂದ್ರ ಸರಕಾರದ ಬಂಡವಾಳಶಾಹಿ ಸಾಮ್ರಾಜ್ಯತ್ವ ಪರ ನಿಲುವು ಮತ್ತು ತಪ್ಪು ಧೋರಣೆಗಳಿಂದ ಪರಿಸ್ಥಿತಿ ಗಂಭೀರಗೊಂಡಿದೆ ಎಂದು ಅವರು ಆರೋಪಿಸಿದರು.

ಈ ಕಾರಣಗಳಿಂದಲೇ ಪೆಟ್ರೋಲ್ ಮತ್ತು ಡೀಸೆಲ್‍ಗಳ ಬೆಲೆ ಪ್ರಥಮ ಬಾರಿ ರೂ. 100, ಖಾದ್ಯತೈಲ ರೂ.200, ಅಡುಗೆ ಅನಿಲ ರೂ.1000 ಕ್ಕೆ ತಲುಪಿವೆ. ಬೆಲೆಯೇರಿಕೆಯ ಬೇಗೆಯಲ್ಲಿ ಬೇಯುತ್ತಿರುವ ಬಡಜನರನ್ನು ಸರಕಾರಗಳು ಪರಿಸ್ಥಿತಿಯ ದಯೆಯ ಪಾಡಿಗೆ ಬಿಟ್ಟಿವೆ. ಜನಕಲ್ಯಾಣದ ಎಲ್ಲ ಕಾರ್ಯಕ್ರಮಗಳು ಕೇವಲ ದಾಖಲೆ ಮತ್ತು ಜಾಹೀರಾತುಗಳ ಘೋóಷಣೆಗೆ ಸೀಮಿತವಾಗಿವೆ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ ಅನೈತಿಕ ಪೋಲೀಸ್‍ಗಿರಿಯ ಘಟನೆಗಳು: ಇತ್ತೀಚೆಗೆ ದಕ್ಷಿಣ ಕನ್ನಡ ಮತ್ತು ಬೆಳಗಾವಿಗಳಲ್ಲಿ ನಡೆದ ಅನೈತಿಕ ಪೋಲೀಸ್‍ಗಿರಿಯ ಘಟನೆ ಚಿಂತಾಜನಕ ವಿಷಯ ಹಾಗೂ ದಕ್ಷಿಣಕನ್ನಡದ ಘಟನೆಯನ್ನು ಬೆಂಬಲಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯು ಖಂಡನೀಯವಾಗಿದೆ. ಸಾಂವಿಧಾನಿಕ ಮೌಲ್ಯಗಳ ಮತ್ತು ಕಾನೂನಿನ ಆಡಳಿತಗಳ ರಕ್ಷಣೆ ಸರಕಾರದ ಹೊಣೆಗಾರಿಕೆಯೇ ವಿನಹ ಅಪರಾಧಿಗಳ ರಕ್ಷಣೆಯಲ್ಲ ಎಂದು ಅವರು ಹೇಳಿದರು.

ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಖಂಡಿಸುವ ಬದಲು ತಪ್ಪಿತಸ್ಥರನ್ನು ಬೆಂಬಲಿಸುವುದು, ಆಕ್ರಮಣಕ್ಕೆ ಬಲಿಯಾದವರನ್ನೇ ಉಪದೇಶಿಸುವುದು ಪ್ರಜಾಸತ್ತಾತ್ಮಕ ವಿರೋಧಿ ಕಾರ್ಯ ವೈಖರಿಯಾಗಿದೆ. ಇದರಿಂದ ಸಮಾಜದಲ್ಲಿ ಕೇವಲ ಅಶಾಂತಿ ಹರಡುವುದು, ಅಪರಾಧಿಗಳ ಧೈರ್ಯ ಹೆಚ್ಚುತ್ತದೆ, ನಾಗರಿಕರಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂದೆ ಪಡೆಯಬೇಕು ಮತ್ತು ಕಾನೂನಿನ ಆಡಳಿತವನ್ನು ಬಲಪಡಿಸಿ ಅನೈತಿಕ ಪೋಲೀಸ್‍ಗಿರಿಯನ್ನುತಡೆಯಬೇಕು ಎಂದು ಮುಹಮ್ಮದ್ ಸಾದ್ ಬೆಳಗಾಮಿ ಆಗ್ರಹಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅಕ್ಟೋಬರ್ 2021ರಿಂದ ಜಾರಿಗೊಳಿಸುವ ಕುರಿತು ಘೋಷಣೆಯು ಆತುರದ ತೀರ್ಮಾನ ಮತ್ತು ದೂರಗಾಮಿ ನಕಾರಾತ್ಮಕ ಪರಿಣಾಮ ಬೀರಬಹುದು. ಶಿಕ್ಷಣದ ಆಧುನೀಕರಣ, ತಂತ್ರಜ್ಞಾನದ ವ್ಯಾಪಕ ಬಳಕೆ, ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಗುಣಮಟ್ಟಕ್ಕೆ ಬೆಳೆಸುವುದು, ಅಧ್ಯಾಪಕರ ಗುಣಮಟ್ಟವನ್ನು ಏರಿಸುವುದು, ಎಲ್ಲರಿಗೆ ಶಿಕ್ಷಣಾವಕಾಶ ಇತ್ಯಾದಿ ಈ ನೀತಿಯ ಕೆಲವು ಶ್ಲಾಘನೀಯ ಅಂಶಗಳು. ಆದರೆ ಇದರ ಹಿನ್ನೆಲೆಯಲ್ಲಿ ಕೋಮುವಾದಿಗಳ ಕೈವಾಡ ಗೋಚರಿಸುತ್ತಿವೆ ಎಂದು ಅವರು ಹೇಳಿದರು.

ಪಾರದರ್ಶಕತೆ, ಚರ್ಚೆ, ವಿಶಾಲರೂಪದ ಸಮಾಲೋಚನೆಗಳಿಲ್ಲದೆ ಈ ನೀತಿಯನ್ನು ಜಾರಿಗೊಳಿಸುವುದು ದೇಶ ಮತ್ತು ರಾಜ್ಯಕ್ಕೆ ನಷ್ಟದಾಯಕವಾಗಬಹುದು. ಈ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತೆ ತೋಚುತ್ತದೆ. ಅಲ್ಪಸಂಖ್ಯಾತ ಮತ್ತು ದುರ್ಬಲ ವರ್ಗಗಳ ಶೈಕ್ಷಣಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂವಿಧಾನದಲ್ಲಿ ಲಭ್ಯವಿರುವ ಸುರಕ್ಷತೆಗಳ ಬಗ್ಗೆ ನಿರ್ಧರಿತ ಧೋರಣೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

ಪಠ್ಯ ಪದ್ಧತಿ ರೂಪಿಸುವ ಸಮಿತಿಗಳಲ್ಲಿ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಸೇರಿಸಬೇಕು. ಈ ನೀತಿಯ ನಕಾರಾತ್ಮಕ ಅಂಶಗಳನ್ನು ಕೇಂದ್ರೀಕರಣ, ಉದ್ಯಮೀಕರಣ, ವಾಣಿಜ್ಯೀಕರಣ, ಕೋಮುವಾದೀಕರಣ, ಅಸಂವಿಧಾನೀಕರಣಗಳೆಂಬ ಶೀರ್ಷಿಕೆಗಳಡಿಯಲ್ಲಿ ವಿವರಿಸಬಹುದು. ರಾಜ್ಯ ಸರಕಾರ ತನ್ನ ತೀರ್ಮಾನವನ್ನು ಮರು ಪರಿಶಿಲಿಸಿ ಈ ನೀತಿಯಲ್ಲಿರುವ ನಕಾರಾತ್ಮಕ ಅಂಶಗಳನ್ನು ಕೊನೆಗೊಳಿಸಿ ದೇಶದ ಅಖಂಡತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸ ಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News