ಕೇವಲ ಶೇ.21 ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ?: ಸಿದ್ದರಾಮಯ್ಯ ಟೀಕೆ

Update: 2021-10-22 05:15 GMT

ಬೆಂಗಳೂರು, ಅ.22: ಭಾರತದಲ್ಲಿ ಕೇವಲ ಶೇ.21 ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? 'ವೈಫಲ್ಯದ ವಿಶ್ವಗುರು' ಕುಖ್ಯಾತಿಗಾಗಿಯೇ?ʼ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದೇಶದಲ್ಲಿ ಇದುವರೆಗೆ ಕೇವಲ 29 ಕೋಟಿ ಜನರಿಗೆ ಮಾತ್ರವೇ ಎರಡು ಡೋಸ್‌ ಲಸಿಕೆ ನೀಡಲಾಗಿದೆ. 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆಯನ್ನೂ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರವು 100 ಕೋಟಿ ಡೋಸ್ ಲಸಿಕೆ‌ ವಿತರಣೆಯ ಸಂಭ್ರಮಾಚರಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ʼದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೋನ ಲಸಿಕೆ ನೀಡಿರುವ ನರೇಂದ್ರ ಮೋದಿ ಸರ್ಕಾರ, ಅವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆʼ ಎಂದು ಕಿಡಿಕಾರಿದ್ದಾರೆ.

ʼದೇಶದಲ್ಲಿ ಇಲ್ಲಿಯವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ?ʼ ಎಂದು ಪ್ರಶ್ನಿಸಿದ್ದಾರೆ.

ʼಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲʼ ಎಂದು ಟೀಕಿಸಿದ್ದಾರೆ.

ʼಅಮೆರಿಕ ಶೇ 56, ಚೀನಾ ಶೇ 70 ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ ಶೇ 21 ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? 'ವೈಫಲ್ಯದ ವಿಶ್ವಗುರು' ಕುಖ್ಯಾತಿಗಾಗಿಯೇ?ʼ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ʼಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆಮೇಲೆ ಮಾಡೋಣʼ ಎಂದು ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News