ಬೆಂಗಳೂರು: ಫುಡ್ ಡೆಲಿವರಿ ಮಾದರಿಯಲ್ಲಿ ಡ್ರಗ್ಸ್ ಪೂರೈಕೆ; ಇಬ್ಬರ ಬಂಧನ

Update: 2021-10-22 14:09 GMT

ಬೆಂಗಳೂರು, ಅ.22: ಫುಡ್ ಡೆಲಿವರಿ ಮಾದರಿಯಲ್ಲಿ ಗ್ರಾಹಕರಿಂದ ಆರ್ಡರ್ ಪಡೆದು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 60 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಜಾಖರ್ಂಡ್ ಮೂಲದ ರವಿ ಹಾಗೂ ರವಿ ಪ್ರಕಾಶ್ ದಾಸ್ ಎಂದು ಗುರುತಿಸಲಾಗಿದೆ. ಬೆಳ್ಳಂದೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದ ಆರೋಪಿಗಳು ಅಕ್ರಮವಾಗಿ ಹಣ ಸಂಪಾದನೆಗಾಗಿ ಡ್ರಗ್ಸ್ ದಂಧೆಗಿಳಿದಿದ್ದರು. ಬಂಧಿತರು ಸಬ್ ಪೆಡ್ಲರ್‍ಗಳಾಗಿದ್ದಾರೆ. ಆದರೆ, ಪ್ರಮುಖ ಪೆಡ್ಲರ್ ತಲೆಮರೆಸಿಕೊಂಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಸದ್ಯ ಬಂಧಿತರಿಂದ 60 ಲಕ್ಷ ರೂ. ಮೌಲ್ಯದ 300 ಎಂಡಿಎಂಎ ಎಕ್ಸೆಟೆಸಿ ಮಾತ್ರೆಗಳು, 350 ಗ್ರಾಂ ಚರಸ್, 1.5 ಕೆಜಿ ಹೈಡ್ರೋ ಗಾಂಜ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಗಿಫ್ಟ್ ಬಾಕ್ಸ್, ಪ್ಯಾಕಿಂಗ್ ಕವರ್ ಹಾಗೂ ಸ್ವಿಗ್ಗಿ ಹಾಗೂ ಡಂಜೋ ಬ್ಯಾಗ್ ಜಪ್ತಿ ಮಾಡಿಕೊಳ್ಳಲಾಗಿದೆ.

ಡ್ರಗ್ಸ್ ಜಾಲ ಪತ್ತೆಹಚ್ಚಿದ ಸಿಸಿಬಿಯ ತಂಡಕ್ಕೆ 60 ಸಾವಿರ ರೂ ಬಹುಮಾನ ನೀಡುವುದಾಗಿ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. 

ಬಿಟ್ ಕಾಯಿನ್ ಬಳಕೆ: ಡಾರ್ಕ್ ನೆಟ್‍ನಲ್ಲಿ ಬಿಟ್ ಕಾಯಿನ್ ಬಳಸಿ ವಿದೇಶದಿಂದ ದೆಹಲಿಗೆ ಡ್ರಗ್ಸ್ ತರಿಸಿ ಸ್ಥಳೀಯ ಡ್ರಗ್ಸ್ ಪೆಡ್ಲರ್‍ಗಳಿಂದ ಮಾದಕ ದ್ರವ್ಯಗಳನ್ನು ಬಿಟ್ ಕಾಯಿನ್ ಮುಖಾಂತರ ಖರೀದಿಸುತ್ತಿದ್ದ ಆರೋಪಿಗಳು ಬೆಂಗಳೂರು ನಗರ ಗ್ರಾಹಕರಿಂದ ಮಾದಕ ದ್ರವ್ಯ ಪದಾರ್ಥಗಳನ್ನು ಆರ್ಡರ್ ತೆಗೆದುಕೊಂಡು ಡಂಜೋ ಪುಸ್ತಕ ಇನ್ನಿತರ ಉಡುಗೊರೆ ಬಾಕ್ಸ್ ಮುಖಾಂತರ ಬರ್ಥ್ ಡೇ ಗಿಫ್ಟ್ ಪ್ಯಾಕ್‍ಗಳಲ್ಲಿ ಗ್ರಾಹಕರ ಮನೆಗಳಿಗೆ ಸರಬರಾಜು ಮಾಡುತ್ತಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪಂತ್ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News