ದೇಶದ ಆಸ್ತಿಯನ್ನೆಲ್ಲ ಕೇಂದ್ರ ಸರಕಾರ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ: ಪ್ರತಾಪ್ ಸಿಂಹ

Update: 2021-10-24 17:15 GMT

ಬೆಂಗಳೂರು, ಅ.24: ‘ಜನರು ಕೋವಿಡ್‍ನಿಂದ ತತ್ತರಿಸಿಹೋಗಿದ್ದು, ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ದೇಶದ ಆಸ್ತಿಗಳನ್ನೆಲ್ಲ ಕೇಂದ್ರ ಸರಕಾರ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕಿರುವುದು ಅಗತ್ಯ’ ಎಂದು ಸಿಪಿಎಂ ಉತ್ತರ ವಲಯದ ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಮಂಜುನಾಥ ನಗರದಲ್ಲಿ ಸಿಪಿಎಂನ ರಾಜಾಜಿನಗರ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಕೋಮುವಾದ ಹಿಮ್ಮೆಟ್ಟಿಸಿ, ಬೆಲೆ ಏರಿಕೆ ಹಾಗೂ ವಿದೇಶಿ ಬಂಡವಾಳವನ್ನು ತಡೆದು ದೇಶವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿಮೂರು ವರ್ಷಕ್ಕೊಮ್ಮೆ ಪಕ್ಷದಿಂದ ಸಮ್ಮೇಳನ ಏರ್ಪಡಿಸಲಾಗುತ್ತಿದೆ ಎಂದರು.

ಕೋವಿಡ್ ಸಂಕಷ್ಟ ಒಂದು ಕಡೆಯಾದರೆ, ಮತ್ತೊಂದು ಕಡೆ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಅದಾನಿ ಆಸ್ತಿ 1.5ಲಕ್ಷ ಕೋಟಿ ರೂ.ಗಳಿಂದ 5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ದೂರಿದ ಅವರು, ಈ ಸಮ್ಮೇಳನದಲ್ಲಿ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಬಡವರ ಹಾಗೂ ಕಾರ್ಮಿಕರ ಮೇಲಿನ ದೌರ್ಜನ್ಯ ಹಾಗೂ ಆರ್ಥಿಕ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸುವ ಸಂಬಂಧ ಚರ್ಚಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಿಪಿಎಂನ ಉತ್ತರ ಜಿಲ್ಲೆ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಹರಳಹಳಿ ಮಾತನಾಡಿ, ‘ಮೋದಿ ಸರಕಾರ ಬಂದ ಮೇಲೆ ಅಡುಗೆ ಅನಿಲದ ಬೆಲೆ ದ್ವಿಗುಣವಾಗಿದೆ, ಸರಕಾರಿ ನೌಕರರನ್ನು ಕೆಲಸದಿಂದ ಹೊರ ಹಾಕಲಾಗುತ್ತಿದೆ, ಜಾತಿ ಧರ್ಮದ ಹೆಸರಿನಲ್ಲಿ ದಲಿತರು ಹಾಗೂ ಮುಸ್ಲಿಮರ ವಿರುದ್ಧ ದೌರ್ಜನ್ಯಗಳು ಹೆಚ್ಚಾಗಿದ್ದು, ಇದರ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News