ಠೇವಣಿ ಕಳೆದುಕೊಳ್ಳಲು ನಿಮಗೆ ಸ್ಥಾನ ನೀಡಬೇಕೇ: ಕಾಂಗ್ರೆಸ್ ವಿರುದ್ಧ ಲಾಲೂ ಗರಂ

Update: 2021-10-25 04:42 GMT
ಲಾಲೂ ಪ್ರಸಾದ್ ಯಾದವ್ (Photo source: PTI)

ಪಾಟ್ನಾ, ಅ.25: ಪ್ರಮುಖ ಮಿತ್ರಪಕ್ಷ ಕಾಂಗ್ರೆಸ್‌ನ ಉಪಯೋಗವನ್ನೇ ಪ್ರಶ್ನಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, "ನಿಮಗೆ ಸೋಲಲು ಅಥವಾ ಠೇವಣಿ ಕಳೆದುಕೊಳ್ಳಲು ವಿಧಾನಸಭೆ ಸ್ಥಾನಗಳನ್ನು ಬಿಟ್ಟುಕೊಡಬೇಕೇ" ಎಂದು ಕೇಳಿದ್ದಾರೆ. ಬಿಹಾರದ ಎಐಸಿಸಿ ಉಸ್ತುವಾರಿ ಭಕ್ತ ಚರಣ್ ದಾಸ್ ಅವರನ್ನು ಅವಿವೇಕಿ (ಎಂದು ಲಾಲೂ ಕರೆದಿರುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ಮಾತ್ರವಲ್ಲದೇ ಎನ್‌ಡಿಎ ಕೂಟದಿಂದಲೂ ತೀಕ್ಷ್ಣ ಟೀಕೆ ವ್ಯಕ್ತವಾಗಿದೆ.

ಪಾಟ್ನಾಗೆ ತೆರಳುವ ಮುನ್ನ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ತಿಂಗಳ 30ರಂದು ನಡೆಯುವ ಕುಶೇಶ್ವರ ಆಸ್ಥಾನ್ ಮತ್ತು ತಾರಾಪುರ ಉಪ ಚುನಾವಣೆಗಳನ್ನು ಉಲ್ಲೇಖಿಸಿ ಮೇಲಿನಂತೆ ಪ್ರತಿಕ್ರಿಯಿಸಿದರು. ಕುಶೇರ್ಶವರ ಆಸ್ಥಾನ ಕ್ಷೇತ್ರದಲ್ಲಿ 2020ರ ಚುನಾವಣೆಯಲ್ಲಿ ಕಾಂಗ್ರೆಸ್ 2ನೇ ಸ್ಥಾನ ಗಳಿಸಿದ್ದರೂ, ಈ ಸ್ಥಾನವನ್ನು ಪ್ರಸಕ್ತ ಚುನಾವಣೆಯಲ್ಲಿ ಪಕ್ಷಕ್ಕೆ ಬಿಟ್ಟುಕೊಡಲು ಆರ್‌ಜೆಡಿ ನಿರಾಕರಿಸಿತ್ತು. ಇದೀಗ ಆರ್‌ಜೆಡಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಯು ವಿರುದ್ಧ ಕಣಕ್ಕೆ ಇಳಿದಿವೆ.

ಬಿಹಾರದಲ್ಲಿ ಮಹಾಮೈತ್ರಿ ಅಕ್ಷರಶಃ ಮುರಿದು ಬಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ, "ಕಾಂಗ್ರೆಸ್ ಜತೆ ಏನು ಮೈತ್ರಿ" ಎಂದು ಲಾಲೂ ಪ್ರಶ್ನಿಸಿದರು. ಆರ್‌ಜೆಡಿ ಹಾಗೂ ಕಾಂಗ್ರೆಸ್ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಗಮನ ಸೆಳೆದಾಗ, "ಭಕ್ತಚರಣ್ ದಾಸ್ ಒಬ್ಬ ಅವಿವೇಕಿ" ಎಂದು ಜರೆದರು.

2020ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ, ನಿತೀಶ್ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ಗೆ ನೀಡಿದ್ದ 70 ಸ್ಥಾನಗಳ ಪೈಕಿ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು ಎಂದು ಟೀಕಿಸಿದರು.

ಲಾಲೂ ಟೀಕೆಯನ್ನು ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಂಡಿಸಿದ್ದು, ಇಂಥ ಹೇಳಿಕೆ ಲಾಲೂ ಅವರ ದಲಿತ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜತೆಗಿನ ಹಲವು ವರ್ಷಗಳ ಮೈತ್ರಿಯಿಂದ ಹತಾಶವಾದ ಲಾಲೂ ಇಂಥ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News