ಬೆಂಗಳೂರು: ಬಾಂಗ್ಲಾ ದೇಶದಲ್ಲಿ ಭಾರತೀಯರ ಹತ್ಯೆ, ಹಲ್ಲೆ ಧಾರ್ಮಿಕ ಕೇಂದ್ರಗಳ ಧ್ವಂಸ ಖಂಡಿಸಿ ಕಾಂಗ್ರೆಸ್ ಧರಣಿ

Update: 2021-10-25 06:28 GMT

ಬೆಂಗಳೂರು, ಅ.25: ಬಾಂಗ್ಲಾ ದೇಶದಲ್ಲಿ ಭಾರತೀಯರ ಹತ್ಯೆ, ಹಲ್ಲೆ ಹಾಗೂ ಧಾರ್ಮಿಕ ದೇವಸ್ಥಾನಗಳನ್ನು ಕೆಡವಿ ಭಾರತೀಯರನ್ನು ಹಿಂಸಿಸುತ್ತಿರುವ ಕಿಡಿಗೇಡಿಗಳ  ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭಾರತೀಯರಿಗೆ ರಕ್ಷಣೆ ನೀಡಬೇಕು ಎಂದು ಬಾಂಗ್ಲಾ ಸರ್ಕಾರವನ್ನು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಗರದಲ್ಲಿಂದು ಧರಣಿ ನಡೆಸಲಾಯಿತು.

ಬಾಂಗ್ಲಾದೇಶದಲ್ಲಿ ಭಾರತೀಯರಿಗೆ ರಕ್ಷಣೆ ಒದಗಿಸುವಲ್ಲಿ ಬಾಂಗ್ಲಾ ಸರ್ಕಾರ ವಿಫಲವಾದಂತೆ ತೋರುತ್ತಿದೆ. ಕೂಡಲೇ ಇಸ್ಕಾನ್ ಹಾಗೂ ಇತರ ಹಿಂದೂ ಧಾರ್ಮಿಕ ದೇವಸ್ಥಾನಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಭಾರತದಲ್ಲಿ ನೆಲೆಸಿರುವ ಬಾಂಗ್ಲರಿಗೆ  ಅತ್ಯಂತ ಸೂಕ್ತ ರಕ್ಷಣೆ ಹಾಗೂ ಮೂಲಭೂತ ಸೌಕರ್ಯವನ್ನು ಭಾರತ ಸರ್ಕಾರ ನೀಡುತ್ತಿರುವಾಗ ಭಾರತೀಯರಿಗೆ ಬಾಂಗ್ಲಾದಲ್ಲಿ ಈ ರೀತಿಯಾದಂಥ ಹಿಂಸೆಗಳನ್ನು  ಮಾಡುತ್ತಿರುವುದು  ಅತ್ಯಂತ ಖಂಡನೀಯ. ಕೂಡಲೇ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಇಂತಹ ಘೋರ ಘಟನೆಗಳ ಬಗ್ಗೆ ಗಮನಹರಿಸಿ ಭಾರತೀಯರಿಗೆ ಸೂಕ್ತ ರಕ್ಷಣೆ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೂಡಲೆ ತುರ್ತಾಗಿ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಕೈಗೊಂಡ ಕ್ರಮಗಳನ್ನು ಬಹಿರಂಗಪಡಿಸಬೇಕು, ಹಿಂದೂಗಳಿಗೆ ರಕ್ಷಣೆ ನೀಡಬೇಕು,  ಹಿಂದೂ  ದೇವಸ್ಥಾನಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಎಂದು ಧರಣಿನಿರತರು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್, ಎ.ಆನಂದ್, ಪ್ರಕಾಶ್, ವೆಂಕಟೇಶ್, ಚಂದ್ರಶೇಖರ, ಪುಟ್ಟರಾಜು  ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News