ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ: ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ

Update: 2021-10-25 08:03 GMT

ಬೆಂಗಳೂರು, ಅ.25: ರಾಜ್ಯ ಸರಕಾರ  ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿರುವುದು ಸಂವಿಧಾನ ವಿರೋಧಿ ನಡೆ ಎಂದು ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರೂ, ಕರ್ನಾಟಕ ಪ್ರಾಂತೀಯ ಕೆಥೊಲಿಕ್ ಧರ್ಮಾಧ್ಯಕ್ಷ ಮಂಡಳಿಯ ಅಧ್ಯಕ್ಷ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಹೇಳಿದ್ದಾರೆ.

ಸೋಮವಾರ ನಗರದ ನಂದಿದುರ್ಗ ರಸ್ತೆಯ ಪಾಲನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಾಹ, ಧರ್ಮದ ವಿಚಾರದಲ್ಲಿ ಭಾರತೀಯ ಪ್ರಜೆಗಳಿಗೆ ಸಂವಿಧಾನವು ಮುಕ್ತ ಸ್ವಾತಂತ್ರ್ಯ ನೀಡಿದ್ದು, ಯಾರು ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಿರುವಾಗ, ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಲ್ಲ ಎಂದರು.

 ನಮ್ಮ ಶಾಲೆ, ಕಾಲೇಜು ಹಾಗೂ  ಶೈಕ್ಷಣಿಕ ಸಂಸ್ಥೆಗಳಗಳಲ್ಲಿ  ನಾವೂ ಎಂದಿಗೂ ಮತಾಂತರ ಆಗಲು ಅವಕಾಶ ಅಂತಹ ಚಟುವಟಿಕೆಗಳಿಗೆ ಅನುವು ಮಾಡಿಕೊಡುವುದಿಲ್ಲ ಎಂದ ಅವರು, ನಾವು ಬಲವಂತದ ಹಾಗೂ ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ ಎಂದವರು ತಿಳಿಸಿದರು.

ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ)ಯೂ ಇದೆ. ಹೀಗಾಗಿ, ಪ್ರತ್ಯೇಕ ಕಾಯ್ದೆಯ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಕರ್ನಾಟಕವೂ ಸರ್ವ ಜನಾಂಗದ ನಾಡು.ಇಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾಯ್ದೆಗಳು ಅಗತ್ಯವಿಲ್ಲ. ಇನ್ನೂ, ಕ್ರೈಸ್ತ ಸಮುದಾಯ ಎಲ್ಲಾ ವರ್ಗಗಳ ಸೇವೆಗೆ ನಿರತವಾಗಿದ್ದು, ಆಸ್ಪತ್ರೆ, ಶಿಕ್ಷಣ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತ ಬಂದಿದೆ ಎಂದು ನುಡಿದರು.

ನೈತಿಕ ಪೊಲೀಸ್ ಗಿರಿಯ ಕುರಿತು ಪೂರಕವಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ ನಂತರದಲ್ಲಿ ರಾಜ್ಯದಲ್ಲಿ ನೈತಿಕ ಪೋಲೀಸ್ ಗಿರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ಹಾಗೂ ಹಲ್ಲೆಗಳೂ ಸಹ ಅಧಿಕವಾಗುತ್ತಿವೆ. ಇನ್ನು

ಮತಾಂತರ ನಿಷೇಧ ಕಾಯ್ದೆ ಬಂದರೆ, ಇಂತಹ ದಾಳಿಗಳು ಮತ್ತಷ್ಟು ಹೆಚ್ಚಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸರಕಾರ ಮತಾಂತರ ನಿಷೇಧ ಕಾಯ್ದೆಯ ಜಾರಿಯ ಚಿಂತನೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಕ್ರೈಸ್ತ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿ ಏಕೆ?

ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘ -ಸಂಸ್ಥೆಗಳ ಮಾತ್ರ ಗಣತಿ ನಡೆಸಲು ಆದೇಶಿಸಿರುವುದರ ಉದ್ದೇಶವಾದರೂ ಏನು? ಸರ್ಕಾರ ಗತಿ ಮಾಡಬೇಕೆಂದರೆ ಮಾಡಲಿ, ಅದಕ್ಕೆ ಆಕ್ಷೇಪ ಇಲ್ಲ. ಆದರೆ ಕ್ರೈಸ್ತ ಸಮುದಾಯವನ್ನು ಮಾತ್ರ ಗುರಿಯಾಗಿ ಗಣತಿಯನ್ನು ನಡೆಸಲು ಆದೇಶಿಸಿರುವುದೇಕೆ? ಅದಲ್ಲದೆ, ಚರ್ಚುಗಳ ವಿವರಗಳೆಲ್ಲವೂ ಈಗಾಗರ್ಲೇ ಸರಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರೂ ಏನೂ ಎಂದು ಅ.ವಂ. ಡಾ.ಪೀಟರ್ ಮಚಾದೋ ಪ್ರಶ್ನಿಸಿದ್ದಾರೆ.

ಭಾರತದ ಮೊದಲ ಮೊದಲ ಜನಗಣತಿಯಿಂದ ಇಲ್ಲಿಯವರೆಗೂ ದೇಶದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯ ಅಂಕಿ-ಅಂಶಗಳು ಕೇಂದ್ರ ಸರ್ಕಾರ ಮತ್ತು ರಾಜ ಸರ್ಕಾರದ ಬಳಿ ಇದೆ. ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಮತಾಂತರ ನಡೆಯುತ್ತಿದೆ ಎಂದು ರೋಪಿಸುವವರು ಈ ಅಂಕಿಅಂಶಗಳನ್ನು ಒಮ್ಮೆ ಪರಿಶೀಲಿಸಿದರೆ ಸತ್ಯಾಂಶ ತಿಳಿಯಲಿದೆ ಎಂದ ಅವರು, ಮತಾಂತರ ನಿಜವೇ ಆಗಿದ್ದರೆ, ಕ್ರೈಸ್ತ ಸಮುದಾಯದ ಸಂಖ್ಯೆ ಇಷ್ಟೊತ್ತಿಗೆ ಅಧಿಕವಾಗಿರಬೇಕಿತ್ತು. ಆದರೆ, ದೇಶದ ಸ್ವಾತಂತ್ರ್ಯದ ನಂತರವೂ ಸಹ ಜನಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಸಂಖ್ಯೆ ಕೇವಲ ಶೇ. 1.8 ರಷ್ಟು ಮಾತ್ರವಿದೆ ಎಂದು ಹೇಳಿದರು.

ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಮಾತನಾಡಿ, ಭಾರತವನ್ನು ಬ್ರಿಟಿಷರು ಬರೋಬ್ಬರಿ 200 ವರ್ಷ ಆಳ್ವಿಕೆ ನಡೆಸಿದರು. ಆದರೂ, ಕ್ರೈಸ್ತರ ಜನಸಂಖ್ಯೆ ಬೆಳೆದಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್, ಶಾಸಕಿ ವಿನಿಷಾ ನಿರೋ, ಕಾಂಗ್ರೆಸ್ ನಾಯಕರಾದ ಪ್ರವೀಣ್ ಪೀಟರ್, ಜೆ.ಆರ್.ಲೋಬೋ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News