ಬಡರೋಗಿಗಳ ಸಂಜೀವಿನಿ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ

Update: 2021-10-25 08:05 GMT

ಮಂಡ್ಯ, ಅ.24: ಸರಕಾರಿ ಆಸ್ಪತ್ರೆಗಳೆಂದರೆ ಮೂಗುಮುರಿಯುವವರೇ ಹೆಚ್ಚು. ಅಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಸಿಗುವುದಿಲ್ಲವೆಂಬುದು ಇದಕ್ಕೆ ಪ್ರಮುಖ ಕಾರಣ. ಜತೆಗೆ, ‘ವೈದ್ಯರು, ಸಿಬ್ಬಂದಿ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ’ ಎಂಬ ಆರೋಪ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಅಲ್ಲೊಂದು, ಇಲ್ಲೊಂದು ಆಸ್ಪತ್ರೆಗಳು ಈ ಅಪವಾದಕ್ಕೆ ಹೊರತಾಗಿವೆ. ಅದರಲ್ಲಿ ಜಿಲ್ಲೆಯ ಬೆಸಗರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಎದ್ದು ಕಾಣುತ್ತದೆ. ಬಡ ರೋಗಿಗಳ ಸಂಜೀವಿನಿಯಾಗಿದೆ.

ಗ್ರಾಮಾಂತರ ಪ್ರದೇಶದ ಜನರಿಗೆ ಸ್ಥಳೀಯವಾಗಿ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲೇ ಸ್ಥಾಪಿತವಾದ ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದ ಆರೋಗ್ಯ ಕೇಂದ್ರ ಈಗ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಉತ್ತಮ ಚಿಕಿತ್ಸಾ ಸೌಲಭ್ಯ ನೀಡುತ್ತಾ ಮಾದರಿಯಾಗಿದೆ.

ಮೊದಲು ಇದು ಪ್ರಾಥಮಿಕ ಆರೋಗ್ಯ ಘಟಕವಾಗಿತ್ತು. ಇದಕ್ಕೆ ಸ್ಥಳೀಯ ಉದ್ಯಮಿ ರಾಮಮ್ಮ ಕೃಷ್ಣಯ್ಯಶೆಟ್ಟಿ ದಂಪತಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದರು. ಈಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ವಾರದ 24 ಗಂಟೆ ಹೆರಿಗೆ ಸೌಲಭ್ಯವಿದೆ. ಸುಸಜ್ಜಿತ ಪ್ರಯೋಗಾಲಯದಲ್ಲಿ ರಕ್ತ, ಕಫ, ಹಿಮೋಗ್ಲೋಬಿನ್, ಎಚ್‍ಐವಿ, ಮಲೇರಿಯಾ, ಮಧುಮೇಹ ಮುಂತಾದ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಇಸಿಜಿ ಸೌಲಭ್ಯವೂ ಇದೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸಾಮಾನ್ಯ ವಾರ್ಡ್, ವಿಶೇಷ ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ ನಿರ್ಮಿಸಲಾಗಿದೆ.

ಅಗತ್ಯ ಮೂಲಭೂತ ಸೌಕರ್ಯಗಳ ಜತೆಗೆ ವೈದ್ಯಾಧಿಕಾರಿ, ದಾದಿಯರು ಹಾಗು ಸಿಬ್ಬಂದಿಯ ಉತ್ತಮ ಸೇವೆಯಿಂದಾಗಿ ರೋಗಿಗಳು ಆರೋಗ್ಯ ಕೇಂದ್ರಕ್ಕೆ ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್‍ಗಳಿಗೆ ಸ್ಥಾನವಿಲ್ಲದಂತಾಗಿದೆ. ಕೇಂದ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ ವೈದ್ಯರ ಪರಂಪರೆಯೇ ಇದೆ. ಈಗಲೂ ಜನರು ಅವರ ಸೇವೆಯನ್ನು ಸ್ಮರಿಸುತ್ತಾರೆ. ಏಳು ವರ್ಷದಿಂದ ಇರುವ ಡಾ.ಎಂ.ಕಿರಣ್‍ಕುಮಾರ್ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಾಮಾನ್ಯ ಚಿಕಿತ್ಸೆಯಲ್ಲದೆ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ಮನೋಚೈತನ್ಯ ಕಾರ್ಯಕ್ರಮದಡಿ ಮಾನಸಿಕ ತಜ್ಞರಿಂದ ತಪಾಸಣೆ ಇದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಚಿಕಿತ್ಸೆಗಾಗಿ ಸ್ನೇಹ ಕ್ಲಿನಿಕ್ ತೆರೆಯಲಾಗಿದೆ. ಪ್ರತಿ ತಿಂಗಳು ಗರ್ಭಿಯರಿಗೆ ವಿಶೇಷ ಪರೀಕ್ಷೆ ನಡೆಸಲಾಗುತ್ತಿದೆ. ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರಗಳನ್ನೂ ಆಯೋಜಿಸಲಾಗುತ್ತಿದೆ. ಕೇಂದ್ರದ ವ್ಯಾಪ್ತಿಯ ಶಾಲೆಗಳ ಹಾಗು ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

“ಪ್ರಮುಖ ವಾಣಿಜ್ಯ ಕೇಂದ್ರವಾದ ಬೆಸಗರಹಳ್ಳಿ ಹೃದಯಭಾಗದಲ್ಲಿರುವ ಈ ಆರೋಗ್ಯ ಕೇಂದ್ರವು ಸುತ್ತಮುತ್ತಲಿನ 24 ಹಳ್ಳಿಗಳ ಸುಮಾರು 30 ಸಾವಿರ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಪ್ರತಿದಿನ ಸುಮಾರು 120 ಮಂದಿ ತಪಾಸಣೆಗೆ ಬರುತ್ತಾರೆ. ಈ ಪೈಕಿ 5ರಿಂದ 10ಮಂದಿಗೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ತಿಂಗಳಿಗೆ ಸುಮಾರು 5 ರಿಂದ 10 ಹೆರಿಗೆಗಳಾಗುತ್ತವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಸಾರ್ವಜನಿಕರು ಆಸ್ಪತ್ರೆಯ ಸೌಲಭ್ಯ ಪಡೆದುಕೊಳ್ಳಬೇಕು.”

-ಡಾ.ಎಂ.ಕಿರಣ್‍ಕುಮಾರ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ.

“ಮೊದಲಿನಿಂದಲೂ ಬೆಸಗರಹಳ್ಳಿ ಆರೋಗ್ಯ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಈಗ ಸುಸಜ್ಜಿತ ಕಟ್ಟಡ ನಿರ್ಮಾಣದಿಂದಾಗಿ ಹೆಚ್ಚಿನ ಸೌಲಭ್ಯಗಳು ಲಭ್ಯ ಇವೆ. ಆದರೆ, ಕೇಂದ್ರ ಸ್ಥಾನದಲ್ಲಿ ವೈದ್ಯಾಧಿಕಾರಿಗಳು ಇಲ್ಲದಿರುವುದು ಕೊರತೆಯಾಗಿದೆ. ರಾತ್ರಿ ವೇಳೆ ದಾದಿಯರೇ ಹೆರಿಗೆ ಮಾಡಿಸಿದರೂ ಅಗತ್ಯಬಿದ್ದಲ್ಲಿ ವೈದ್ಯರು ಇರುವುದು ಸೂಕ್ತ.”

-ಯೋಗಾನಂದ, ಮರಳಿಗ. 

“ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ ಹೊಂದಿರುವ ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ವೈದ್ಯರು, ದಾದಿಯರು, ಸಿಬ್ಬಂದಿಯನ್ನೂ ಹೊಂದಿದೆ. ಆಸ್ಪತ್ರೆ ಆವರಣದಲ್ಲಿ ವಿವಿಧ ಗಿಡಗಳ ಪುಟ್ಟ ಉದ್ಯಾನವನವಿದ್ದು, ಉತ್ತಮ ಪರಿಸರ ನಿರ್ಮಾಣ ಮಾಡಲಾಗಿದೆ. ನಾನು ನಿಯಮಿತವಾಗಿ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೇನೆ. ಜನಸಾಮಾನ್ಯರು ಉಚಿತವಾಗಿ ಸಿಗುವ ಚಿಕಿತ್ಸಾ ಸೇವೆಯನ್ನು ಪಡೆದುಕೊಳ್ಳಬೇಕು.”

-ವೆಂಕಟರಮಣ, ನಲ್ಲಹಳ್ಳಿ.

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News