ಬೆಂಗಳೂರು: ಕಟ್ಟಡ ತೆರವು ಕಾರ್ಯಾಚರಣೆ; ಶಾಸಕ ಸೇರಿ ಹಲವರ ಬಂಧನ

Update: 2021-10-25 12:56 GMT

ಬೆಂಗಳೂರು, ಅ.25: ಇಲ್ಲಿನ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಚರಣೆಗೆ ಅಡ್ಡಿಪಡಿಸಿ ಪ್ರತಿಭಟಿಸಿದ ಹಿನ್ನೆಲೆ ಶಾಸಕ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿವೃದ್ಧಿಪಡಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಸ್ಥಳದಲ್ಲಿ 2018ರ ಬಳಿಕ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸೋಮವಾರ ಸೋಮಶೆಟ್ಟಿಹಳ್ಳಿಯ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಅಧಿಕಾರಿಗಳು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕ ಆರ್.ಮಂಜುನಾಥ್ ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿ, ವಾಹನದಲ್ಲಿ ಕರೆದೊಯ್ದರು.

ಸೋಮವಾರ ಬೆಳಗ್ಗೆ 10ಕ್ಕೂ ಅಧಿಕ ಜೆಸಿಬಿ ಹಾಗೂ 10 ಅಧಿಕ ಹಿಟಾಚಿ ಯಂತ್ರಗಳೊಂದಿಗೆ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಬಿಡಿಎ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಟ್ಟಡಗಳನ್ನು ಒಡೆಯುವುದಕ್ಕೆ ಸ್ಥಳೀಯರು ಅಡ್ಡಿಪಡಿಸಿದರು.

ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಅವರೂ ಸ್ಥಳಕ್ಕೆ ಧಾವಿಸಿ ಕಟ್ಟಡಗಳನ್ನು ಕೆಡಹುವುದನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಆದರೆ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ತೆರವು ಕಾರ್ಯವನ್ನು ಕೈಗೊಂಡಿದ್ದೇವೆ. ಇದಕ್ಕೆ ಅಡ್ಡಿಪಡಿಸಬಾರದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಬಳಿಕ ಮೂರು ಮಹಡಿಯ ಒಂದು ಕಟ್ಟಡ, ಎರಡು ಮಹಡಿಯ ಮೂರು ಕಟ್ಟಡ ಮತ್ತು ಮೂರು ಶೆಡ್‍ಗಳನ್ನು ಒಡೆದು ಹಾಕಲಾಯಿತು. ಆಗ ಸ್ಥಳೀಯರು ಶಾಸಕ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಅಧಿಕಾರಿ, ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2018ರ ಆಗಸ್ಟ್ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳನ್ನು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆ ತೆರವುಗೊಳಿಸುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News