ಡಿಜಿಪಿಗೆ ಕಾಂಗ್ರೆಸ್ ನಿಯೋಗ ದೂರು: ಪ್ರಚೋದನಾಕಾರರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2021-10-25 14:50 GMT

ಬೆಂಗಳೂರು, ಅ.25: ಕ್ಷುಲ್ಲಕ ಕಾರಣಗಳನ್ನೆ ಮುಂದಿಟ್ಟುಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವ್ಯಕ್ತಿಗಳ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಕೆ ಮಾಡಿದೆ.

ಸೋಮವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ರಾಜ್ಯಸಭಾ ಸದಸ್ಯ ನಸೀರ್ ಹುಸೇನ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಇತ್ತೀಚಿಗೆ ತುಮಕೂರು ಬಂದ್ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿರುವುದಲ್ಲದೆ, ಹಲ್ಲೆ, ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಇಂತಹ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದರು.

ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೂ, ಪೊಲೀಸರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಆದರೆ, ಅನೈತಿಕ ಪೊಲೀಸ್‍ಗಿರಿ ಈ ರಾಜ್ಯದಲ್ಲಿ ತಲೆ ಎತ್ತಿದೆ. ಅಲ್ಲದೆ, ನಮ್ಮ ಕರ್ನಾಟಕವೂ ಕಾನೂನು ಸುವ್ಯವಸ್ಥೆಗೆ ಹೆಸರು ಗಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದರು.

ಪ್ರಮುಖವಾಗಿ ಬೆಳಗಾವಿಯಲ್ಲಿ ಇತ್ತೀಚಿಗೆ ನಡೆದ ಅರ್ಬಾಝ್ ಹತ್ಯೆ ಪ್ರಕರಣವೂ ದೇಶವನ್ನೆ ಬೆಚ್ಚಿಬೀಳಿಸಿದೆ. ಧರ್ಮದ ಹೆಸರಿನಲ್ಲಿ ಕೊಲೆ ಮಾಡಿರುವುದು ದುರಂತ. ಅಲ್ಲದೆ, ಕೋಮುವಾದಿ ಶಕ್ತಿಗಳನ್ನು ಪ್ರಾರಂಭದ ಹಂತದಲ್ಲೇ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ವಿ.ಆರ್.ಸುದರ್ಶನ್, ಮನೋಹರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News