ಕಟ್ಟಡ ಕಾಮಗಾರಿ ಮುಂದುವರಿಸಲು 5ಲಕ್ಷ ರೂ.ಲಂಚ; ಬಿಡಿಎ ಎಇಇ ಮಂಜುನಾಥ್, ಸರ್ವೇಯರ್ ಜಯರಾಂ ಎಸಿಬಿ ಬಲೆಗೆ

Update: 2021-10-25 14:58 GMT
ಬಂಧಿತ ಆರೋಪಿಗಳು

ಬೆಂಗಳೂರು, ಅ. 25: ಕಟ್ಟಡ ಕಾಮಗಾರಿ ಮುಂದುವರಿಸಲು 5ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟು ಸರ್ವೇಯರ್ ಮೂಲಕ 2 ಲಕ್ಷ ರೂ.ಗಳನ್ನು ಮುಂಗಡವಾಗಿ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ(ಬಿಡಿಎ) ಸಹಾಯಕ ಎಂಜಿನಿಯರ್(ಎಇಇ) ಮಂಜುನಾಥ್ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರದ ಎಚ್‍ಬಿಆರ್ ಲೇಔಟ್‍ನ ನಿವಾಸಿ ತಮ್ಮ ಸಂಬಂಧಿಕರಿಗೆ ಸೇರಿದ ಆರ್‍ಟಿ ನಗರದ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮಂಜುನಾಥ್ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ್ದರು. ಅಲ್ಲದೆ, ಸರ್ವೆಯರ್ ಜಯರಾಮ್‍ನನ್ನು ಸಂಪರ್ಕಿಸಲು ಸೂಚಿಸಿದ್ದರು.

ಫಿರ್ಯಾದಿ, ಸರ್ವೆಯರ್ ಜಯರಾಮ್ ಅವರನ್ನು ಸಂಪರ್ಕಿಸಿದರೆ ಅವರು ಕಟ್ಟಡ ಕಾಮಗಾರಿ ಮುಂದುವರಿಸಲು 5ಲಕ್ಷ ರೂ.ಲಂಚದ ಬೇಡಿಕೆ ಇಟ್ಟಿದ್ದು, 2ಲಕ್ಷ ರೂ.ಮುಂಗಡವಾಗಿ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಡಿಎ ಎಇಇ ಮಂಜುನಾಥ್, ಸರ್ವೆಯರ್ ಜಯರಾಮ್ ಅವರನ್ನು ದಸ್ತಗಿರಿ ಮಾಡಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News