ಬೆಂಗಳೂರು: ಪ್ರವಾಸ ನೆಪದಲ್ಲಿ ವಂಚನೆ; ಸೆರೆ
ಬೆಂಗಳೂರು, ಅ.26: ಪ್ರವಾಸ ಕಳುಹಿಸುವುದಾಗಿ ಹಣ ಪಡೆದು ಸದಸ್ಯರನ್ನಾಗಿ ಮಾಡಿಕೊಂಡು ಚೈನ್ ಲಿಂಕ್ ಆಧಾರದಲ್ಲಿ ಇತರರನ್ನು ಸೇರಿಸಿದರೆ ವಂಚಿಸುತ್ತಿದ್ದ ಆರೋಪದಡಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಯಲ್ ಡ್ರೀಮ್‍ಟು ಪ್ಲೈ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಪ್ರಶಾಂತ್ ಬಿ ಬಂಧಿತ ಆರೋಪಿಯಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ಕಂಪೆನಿ ಹೆಸರಿನಲ್ಲಿ ವಿವಿಧ ಆಸೆ, ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪಿ ಮೊದಲು ವಿದೇಶಿ ಪ್ರವಾಸದ ಹೆಸರಲ್ಲಿ ಸಾರ್ವಜನಿಕರನ್ನು ಸೆಳೆಯುತ್ತಿದ್ದ. ಬಳಿಕ ಚೈನ್ ಲಿಂಕ್‍ನಲ್ಲಿ ಬೇರೆಯವರನ್ನು ಕಂಪೆನಿಗೆ ಸೇರಿಸುವಂತೆ ಕೋರುತ್ತಿದ್ದ. ಹೊಸದಾಗಿ ಸೇರಿಸಿದರೆ, ಅವರ ಲಾಭದಲ್ಲಿ ಶೇ.25ರಷ್ಟು ಹಣ ನೀಡುವುದಾಗಿ ನಂಬಿಸುತ್ತಿದ್ದ. ಬಳಿಕ ಯಾವುದೇ ಹಣ ನೀಡದೆ, ಪ್ರವಾಸಕ್ಕೂ ಕರೆದುಕೊಂಡು ಹೋಗದೆ ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಯ ವಂಚನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.