ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವ ಹಕ್ಕಿಲ್ಲವೇ?

Update: 2021-10-27 19:30 GMT

ದೇಶದ ಚುಕ್ಕಾಣಿ ಹಿಡಿದವರಿಂದಾದ ಜಿಎಸ್‌ಟಿ, ನೋಟ್‌ಬ್ಯಾನ್‌ನಂತಹ ಕೆಲವು ತಪ್ಪು ನಿರ್ಧಾರಗಳಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದ ಭಾರತಕ್ಕೆ ಕೊರೋನ ಮಹಾಮಾರಿಯ ಆಗಮನವು ಇನ್ನಷ್ಟು ದುಸ್ಥಿತಿಗೆ ತಲುಪುವಂತೆ ಮಾಡಿದೆ. ದೇಶದ ಹೆಚ್ಚಿನೆಲ್ಲ ಕ್ಷೇತ್ರಗಳು, ಅದು ಆಹಾರ, ಸಾರಿಗೆ, ಪ್ರವಾಸೋದ್ಯಮ ಅಥವಾ ಶೈಕ್ಷಣಿಕ ಮತ್ತಿತರ ಯಾವುದೇ ವಲಯವಾಗಿರಲಿ ಸಂಕಷ್ಟದಿಂದ ಹೊರತಾಗಿಲ್ಲ.

ಭಾರತದಲ್ಲಿ ಇಂದೂ ಒಪ್ಪತ್ತಿನ ಊಟಕ್ಕಾಗಿ ಪರಿತಪಿಸುತ್ತಿರುವ ಎಷ್ಟೋ ಜನರಿದ್ದಾರೆ. ಹಸಿವಿನ ಅನುಪಾತದಲ್ಲಿ ಭಾರತ 101ನೇ ಸ್ಥಾನದಲ್ಲಿದೆ ಎಂದು ಕೆಲವು ಅಧ್ಯಯನ ವರದಿಗಳು ಹೇಳುತ್ತಿವೆ. ಇದು ನಿಜಕ್ಕೂ ಖೇದಕರ ಸಂಗತಿ. ಈ ನಡುವೆ ಅಡುಗೆ ಅನಿಲದ ಬೆಲೆ ಗಗನಕ್ಕೇರಿದೆ. ತೈಲಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅಲ್ಲದೆ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ಜನಸಾಮಾನ್ಯರನ್ನು ನಾಳೆಯ ಬಗ್ಗೆ ಆತಂಕ ಪಡುವಂತೆ ಮಾಡಿದೆ. ಇದು ಹೀಗೆಯೇ ಮುಂದುವರಿದರೆ ಮಧ್ಯಮ ಮತ್ತು ಕೆಳವರ್ಗದ ಜನರ ಗತಿಯೇನು? ಇದಕ್ಕೆಲ್ಲ ಯಾರು ಹೊಣೆ?

ಈಗ ದೇಶದಲ್ಲಿ ಯುವಜನತೆ ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಹುಡುಕಬೇಕಾದ ಆಡಳಿತವರ್ಗ ಕೀಳುಮಟ್ಟದ ರಾಜಕೀಯದಲ್ಲಿ ಮಗ್ನವಾಗಿದೆ.

ನಮಗೆಲ್ಲರಿಗೂ ತಿಳಿದಿರುವಂತೆ ಕೊರೋನ ಮಹಾಮಾರಿ ಎಲ್ಲ ಕ್ಷೇತ್ರಗಳಲ್ಲೂ ವಿಪ್ಲವವನ್ನುಂಟು ಮಾಡಿದೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಎಷ್ಟೋ ಶಿಕ್ಷಕ-ಶಿಕ್ಷಕಿಯರು ತಮಗೆ ಕೆಲಸವಿಲ್ಲದೆ, ಬೇರೆ ಕಸುಬಿನ ದಾರಿಯೂ ಕಾಣದೆ ಮನೆಯಲ್ಲೇ ಉಳಿದಿದ್ದಾರೆ. ಸರಿಯಾಗಿ ಶುಲ್ಕ ಪಾವತಿಸದ ಕಾರಣ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಇಂತಹ ದುರವಸ್ಥೆಗೆ ನಾವು ದೂಷಿಸುವುದಾದರೂ ಯಾರನ್ನು? ಪೋಷಕರನ್ನೋ, ಶಿಕ್ಷಕರನ್ನೋ ಅಥವಾ ಆಡಳಿತ ವರ್ಗವನ್ನೋ?

ಬಿಎಡ್ ವಿದ್ಯಾರ್ಥಿನಿಯಾದ ನನ್ನ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ಇಂಟರ್ನ್‌ಶಿಪ್‌ನ ಅವಕಾಶಕ್ಕಾಗಿ ಇತ್ತೀಚೆಗೆ ಕೆಲವು ಶಾಲೆಗಳಿಗೆ ಭೇಟಿ ನೀಡಬೇಕಾಯಿತು. ಅದು ನನ್ನ ಶಿಕ್ಷಣ ತರಬೇತಿಯ ಒಂದು ಭಾಗವಾಗಿದೆ. ಮಂಗಳೂರಿನ ಒಂದು ಶಾಲೆಗೆ ಭೇಟಿ ಕೊಟ್ಟಾಗ ನನಗೆ ಆದ ಅನುಭವ ಇಂದಿನ ದುರವಸ್ಥೆಗೆ ನಿಜವಾಗಿಯೂ ಯಾರನ್ನು ಹೊಣೆಯಾಗಿಸುವುದು ಎಂದು ತಿಳಿಯದಾಯಿತು. ಒಂದು ದಿನ ಬೆಳಗ್ಗೆ 9:30ರ ಸುಮಾರಿಗೆ ನಾನು ಆ ಶಾಲೆಗೆ ಭೇಟಿ ನೀಡಿದೆ. ಮುಖ್ಯ ಶಿಕ್ಷಕಿ ಬರುವವರೆಗೆ ಕೆಲವು ಸಮಯ ನನ್ನನ್ನು ಕಾಯಲು ಸೂಚಿಸಲಾಯಿತು. ನಾನು ಕಾಯಲು ಕುಳಿತಂತಹ ಕೊಠಡಿಯಲ್ಲಿ ಇಬ್ಬರು ಶಾಲಾ ಸಿಬ್ಬಂದಿ ಮಕ್ಕಳು ಪಾವತಿಸಬೇಕಾದ ಶುಲ್ಕದಲ್ಲಿ ಎಷ್ಟು ಬಂದಿದೆ ಮತ್ತು ಎಷ್ಟು ಬರಲು ಬಾಕಿ ಇದೆ ಎಂಬ ಲೆಕ್ಕಾಚಾರ ಮಾಡುತ್ತಿದ್ದರು. ಆಗ ಅಲ್ಲಿದ್ದ ಒಬ್ಬ ಮಹಿಳಾ ಸಿಬ್ಬಂದಿ ಇನ್ನೊಬ್ಬರೊಂದಿಗೆ ‘‘ನನ್ನ ಮಗನ ಫೀಸ್ ಇನ್ನೂ ಕಟ್ಟಿಲ್ಲ, ಏನು ಮಾಡುವುದೆಂದು ತೋಚುತ್ತಿಲ್ಲ’’ ಎಂದರು. ಆಕೆ ಮುಂದುವರಿಸುತ್ತಾ ‘‘ನನ್ನ ಮಗನ ಶುಲ್ಕದ ವಿಷಯದಲ್ಲಿ ಅವರ ಶಾಲೆಯವರು ಮಕ್ಕಳೊಂದಿಗೆ ಚರ್ಚಿಸುವುದಿಲ್ಲ. ನಮ್ಮ ಶಾಲೆ ನಿಮ್ಮ ಶಾಲೆಯಂತೆ ಅಲ್ಲವೆಂದು ಮಗ ಹೇಳಿದ’’ ಎಂದಾಗ ಈ ಮಹಿಳೆ ಯಾಕಾಗಿ ಹೀಗೆ ಹೇಳುತ್ತಿದ್ದಾಳೆ ಎಂದು ನನಗೆ ಕುತೂಹಲ ಮೂಡಿತು. ಆದರೆ ಕೆಲವೇ ನಿಮಿಷಗಳಲ್ಲಿ ನನಗದು ಅರ್ಥವಾಯಿತು.

ನನ್ನೊಂದಿಗೆ ಇನ್ನೂ ಇಬ್ಬರು ಪೋಷಕರು ಮುಖ್ಯಶಿಕ್ಷಕಿಗಾಗಿ ಕಾಯುತ್ತಿದ್ದರು. ಬಹುಶಃ ಅವರದ್ದ್ದೂ ಶುಲ್ಕದ ವಿಷಯವಾಗಿರಬೇಕು. ಒಬ್ಬರು ಪೋಷಕರು ಒಳಗೆ ಹೋಗಿ ಮುಖ್ಯಶಿಕ್ಷಕಿಯವರೊಂದಿಗೆ ಮಾತನಾಡಿ ಹೊರಬಂದರು. ನಂತರ ನನಗೆ ಒಳಗಿನಿಂದ ಮುಖ್ಯಶಿಕ್ಷಕಿಯವವರು ‘‘ಯಾರೆಲ್ಲ ಶುಲ್ಕ ಕಟ್ಟಲಿಲ್ಲವೋ ಅವರನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಬಿಡಬೇಡಿ. ಹೊರಗೆ ಬಿಸಿಲಿನಲ್ಲಿ ನಿಲ್ಲಿಸಿ’’ ಎಂದು ಕೂಗಿ ಹೇಳುತ್ತಿರುವುದು ಕೇಳಿಸಿತು. ನಾನು ಯಾವ ಕಾರಣಕ್ಕೂ ಇಂಟರ್ನ್‌ಶಿಪ್‌ಅನ್ನು ಈ ಶಾಲೆಯಲ್ಲಿ ಮಾಡುವುದಿಲ್ಲವೆಂದು ಆ ನಿಮಿಷವೇ ನಿರ್ಧರಿಸಿದೆ. ಇದರಲ್ಲಿ ಆ ಬಡ ಮಕ್ಕಳ ತಪ್ಪಾದರೂ ಏನು? ಮಕ್ಕಳು ಶಾಲೆಗೆ ಬಂದದ್ದೇ ತಪ್ಪೆ? ಅವರನ್ನು ಎಲ್ಲಾ ಮಕ್ಕಳ ಮುಂದೆ ಅವಮಾನ ಮಾಡಿದರೆ ಆ ಎಳೆ ಪ್ರಾಯದ ಮಕ್ಕಳಲ್ಲಿ ಯಾವ ಪರಿಣಾಮ ಬೀರಬಹುದು? ಮುಖ್ಯಶಿಕ್ಷಕಿಯ ಕೆಲಸವೇನಿದ್ದರೂ ಪೋಷಕರನ್ನು ಕರೆದು ಮಾತನಾಡುವುದಷ್ಟೇ ಅಲ್ಲವೇ? ಮಕ್ಕಳಿಗೂ ಶುಲ್ಕಕ್ಕೂ ಸಂಬಂಧ ಕಲ್ಪಿಸಿ ಅವರಿಗೆ ದಂಡನೆ ನೀಡುವುದು ಮಾನವೀಯ ಕ್ರಮವೇ? ಶಿಕ್ಷಣ ಸಂಸ್ಥೆಗಳೂ ಆರ್ಥಿಕ ಸಂಕಷ್ಟವನ್ನು ಅನುಭವಿಸಿವೆ ನಿಜ; ಇದನ್ನು ಯಾರೂ ನಿರಾಕರಿಸುವಂತಿಲ್ಲ.

ಆದರೆ ಈ ಕಾರಣಕ್ಕಾಗಿ ಮಕ್ಕಳ ಮೇಲೆ ಶೋಷಣೆ ನಡೆಸುವುದು ಸರಿಯೇ? ಶಿಕ್ಷಣದ ವ್ಯಾಪಾರಿಕರಣವೇ ಇದಕ್ಕೆ ಕಾರಣವಲ್ಲವೇ? ಇಂದಿನ ಪರಿಸ್ಥಿತಿಯಲ್ಲಿ ಒಪ್ಪತ್ತಿನ ಅನ್ನಕ್ಕಾಗಿ ಪರದಾಡುತ್ತಿರುವ ಹೆಚ್ಚಿನ ಪೋಷಕರು ಮಕ್ಕಳ ಶುಲ್ಕವನ್ನು ಭರಿಸುವಷ್ಟು ಶಕ್ತರಾಗಿಲ್ಲ. ಶುಲ್ಕ ಭರಿಸಲು ಸಾಧ್ಯವಾಗದಿದ್ದರೆ ಸರಕಾರಿ ಶಾಲೆ ಇಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ ಸರಕಾರಿ ಶಾಲೆಗಳಲ್ಲಿ ಎಷ್ಟು ಮಂದಿ ಶಿಕ್ಷಕರು ಇರುತ್ತಾರೆ? ಯಾವ ರೀತಿಯ ವ್ಯವಸ್ಥೆ ಇದೆ? ಯಾವ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ತಿಳಿಯಲು ಈ ಶಿಕ್ಷಣ ತರಬೇತಿ ನಮಗೆ ಅವಕಾಶ ನೀಡಿದೆ. ಸರಕಾರಿ ಶಾಲೆಗಳಿಗೂ ಭೇಟಿ ನೀಡಿದ್ದೇನೆ. ಹೆಚ್ಚಿನ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕಲಿಸಲು ಕೇವಲ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇರುತ್ತಾರೆ. ಎಲ್ಲ ಸರಕಾರಿ ಶಾಲೆಗಳು ಇದೇ ರೀತಿ ಇವೆ ಎಂದು ನಾನು ಹೇಳುತ್ತಿಲ್ಲ. ಆದರೆ ಹೆಚ್ಚಿನ ಸರಕಾರಿ ಶಾಲೆಗಳ ಪರಿಸ್ಥಿತಿ ಇದೇ ಆಗಿದೆ. ಇದು ಹೀಗೆಯೇ ಮುಂದುವರಿದರೆ ಬಡಮಕ್ಕಳ ಮುಂದಿನ ಶಿಕ್ಷಣದ ಗತಿಯೇನು? ಹತ್ತಾರು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಈ ಎಲ್ಲಾ ಅನುಭವಗಳಿಗೆ ಅವಕಾಶ ಮಾಡಿಕೊಟ್ಟ ಬಿಎಡ್ ಶಿಕ್ಷಣಕ್ಕೆ ನಾನು ಆಭಾರಿಯಾಗಿದ್ದೇನೆ.

Writer - ಉಮ್ಮುಹಬೀಬ, ಮಂಗಳೂರು

contributor

Editor - ಉಮ್ಮುಹಬೀಬ, ಮಂಗಳೂರು

contributor

Similar News