ಕೊಹ್ಲಿಗೆ ಒಂದು, ರಾಹುಲ್‌ಗೆ 2 ಸ್ಥಾನ ನಷ್ಟ

Update: 2021-10-28 03:44 GMT
photo:crictracker.com

ದುಬೈ, ಅ. 27: ಬುಧವಾರ ಬಿಡುಗಡೆಗೊಂಡ ಐಸಿಸಿ ಪುರುಷರ ಟ್ವೆಂಟಿ-20 ಆಟಗಾರರ ರ್ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಅದೇ ವೇಳೆ, ಕೆ. ಎಲ್. ರಾಹುಲ್ ಎರಡು ಸ್ಥಾನಗಳನ್ನು ಕಳೆದುಕೊಂಡು ಎಂಟನೇ ಸ್ಥಾನದಲ್ಲಿ ನೆಲೆಸಿದ್ದಾರೆ.

ಟ್ವೆಂಟಿ-20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 49 ಎಸೆತಗಳಲ್ಲಿ 57 ರನ್ ಗಳಿಸಿದ್ದರು. ರಾಹುಲ್ 3 ರನ್ ಗಳಿಸಿ ಬೇಗನೇ ಔಟಾಗಿದ್ದರು. ಭಾರತವು 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಆದರೆ ಪಾಕಿಸ್ತಾನವು ಇನ್ನೂ 13 ಎಸೆತಗಳು ಬಾಕಿಯಿರುವಂತೆಯೇ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿಯನ್ನು ತಲುಪಿತು.

ಇದೇ ಪಂದ್ಯದಲ್ಲಿ 79 ರನ್ ಗಳಿಸಿ ಅಜೇಯರಾಗುಳಿದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಮೂರು ಸ್ಥಾನಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್ಯಾಂಕಿಂಗ್ ಆಗಿದೆ.

ಮಂಗಳವಾರ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಪಾಕಿಸ್ತಾನದ ಪಂದ್ಯದಲ್ಲಿ ಅವರು 33 ರನ್ ಗಳಿಸಿದ್ದರು.

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 40 ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 51 ರನ್ ಗಳಿಸಿರುವ ದಕ್ಷಿಣ ಆಫ್ರಿಕದ ಬ್ಯಾಟರ್ ಏಡನ್ ಮರ್ಕ್ರಾಮ್ 8 ಸ್ಥಾನಗಳಷ್ಟು ಮೇಲಕ್ಕೇರಿ 3ನೇ ಸ್ಥಾನ ಪಡೆದಿದ್ದಾರೆ.

ಮೊದಲ ಸ್ಥಾನದಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲಾನ್ ಇದ್ದರೆ, ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಇದ್ದಾರೆ.

ಸ್ಕಾಟ್‌ಲ್ಯಾಂಡ್ ವಿರುದ್ಧ 46 ರನ್ ಗಳಿಸಿದ ಅಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಾಝ್ 9 ಸ್ಥಾನ ಮೇಲಕ್ಕೆ ನೆಗೆದು ಜೀವನಶ್ರೇಷ್ಠ 12ನೇ ಸ್ಥಾನದಲ್ಲಿದ್ದಾರೆ. 3 ವಿಕೆಟ್‌ಗಳನ್ನು ಉರುಳಿಸಿ ಭಾರತದ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನದ ವೇಗದ ಬೌಲರ್ ಶಹೀನ್ ಅಫ್ರಿದಿ 11 ಸ್ಥಾನಗಳಷ್ಟು ಮೇಲಕ್ಕೆ ನೆಗೆದು 12ನೇ ಸ್ಥಾನ ಗಳಿಸಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ಪಾಕಿಸ್ತಾನದ ಬೌಲರ್ ಹಾರಿಸ್ ರವೂಫ್ 34 ಸ್ಥಾನಗಳನ್ನು ಗಳಿಸಿ ಜೀವನಶ್ರೇಷ್ಠ 17ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News