ಡ್ರಗ್ಸ್ ,ಬಿಟ್ ಕಾಯಿನ್ ದಂಧೆ: ರಾಜ್ಯದ ಪ್ರಭಾವಿ ರಾಜಕಾರಣಿಗಳ ಶಾಮೀಲು?

Update: 2021-10-29 06:54 GMT

ಬೆಂಗಳೂರು, ಅ.28: ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜ ಕಾರಣಿಗಳು ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ ಬೆನ್ನಿಗೇ, ಈ ಬಗ್ಗೆ ಆರೋಪ, ಪ್ರತ್ಯಾರೋಪಗಳು ತೀವ್ರಗೊಂಡಿವೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರು ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಪ್ರಭಾವಿ ರಾಜಕಾರಣಿ ಗಳು ಭಾಗಿಯಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಆರೋಪಿಸಿದ್ದರು. ರಾಜಕೀಯ ವಲಯದಲ್ಲಿ ಈ ಟ್ವೀಟ್ ಭಾರೀ ಸಂಚಲನವನ್ನು ಮೂಡಿಸಿದೆ.

ಪ್ರಧಾನ ಮಂತ್ರಿ ಸಚಿವಾಲಯದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕಚೇರಿಗೆ ಪತ್ರವೊಂದು ಬಂದಿದ್ದು, ಇತ್ತೀಚೆಗೆ ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ, ಡ್ರಗ್ಸ್ ಹಾಗೂ ಬಿಟ್ ಕಾಯಿನ್ ದಂಧೆಯ ಕುರಿತು ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಇಂತಹ ಗಂಭೀರ ಪ್ರಕರಣದ ತನಿಖೆ ಅರ್ಧಕ್ಕೆ ನಿಂತಿರುವ ಕಾರಣಗಳೇನು? ಆರೋಪಿಗಳ ಸಂಪರ್ಕದಲ್ಲಿದ್ದ ಇನ್ನಿತರ ವ್ಯಕ್ತಿಗಳನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಡಿಜಿಪಿ ಅವರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹ್ಯಾಕರ್ ಹೆಸರು ಮುನ್ನೆಲೆಗೆ:

ರಾಜ್ಯದಲ್ಲಿ ಬಿಟ್ ಕಾಯಿನ್ ಸುದ್ದಿ ಬೆನ್ನಲ್ಲೇ ಕಳೆದ ವರ್ಷ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಈತನಿಂದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‌ಗಳನ್ನು ಸ್ತಂಭನಗೊಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಶ್ರೀಕೃಷ್ಣ ರಾಜ್ಯದ ಇ-ಸಂಗ್ರಹಣಾ ವ್ಯವಸ್ಥೆಯ ಪೋರ್ಟಲ್ ಹ್ಯಾಕ್ ಮಾಡಿ 11 ಕೋಟಿ ರೂ. ಮೊತ್ತವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ ಎನ್ನಲಾಗಿದೆ. ಡಾರ್ಕ್ ವೆಬ್ ಮೂಲಕ ಮಾದಕವಸ್ತು ತರಿಸಿ, ಪೂರೈಕೆ ಮಾಡುತ್ತಿದ್ದ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ಬಂಧಿಸಲಾಗಿತ್ತು. ಬಳಿಕ ಹ್ಯಾಕಿಂಗ್ ಮತ್ತು ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. ಆರೋಪಿಗಳು ವಿವಿಧ ರಾಜ್ಯಗಳ ಪೋರ್ಟಲ್‌ಗಳು ಮತ್ತು ಹಣಕಾಸು ವಹಿವಾಟಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದು ತನಿಖೆ ವೇಳೆ ಬಯಲಾಗಿತ್ತು.

ಈ ಕುರಿತು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿಯೇ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು ಎಂದುಹೇಳಿದ್ದಾರೆ. ಆರೋಪಿಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕೇಂದ್ರದ ಬಿಜೆಪಿ ಸರಕಾರ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸಬಾರದು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಏನಿದು ಬಿಟ್ ಕಾಯಿನ್?

ರೂಪಾಯಿ ಹಾಗೂ ಡಾಲರ್‌ಗಳಂತೆಯೇ ಇದು ಕೂಡ ಒಂದು ನಾಣ್ಯ. ಆದರೆ, ನಿಗೂಢ ಹಣ (ಕ್ರಿಪ್ಟೋ ಕರೆನ್ಸಿ). ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ಮೇಲೆ ಅಂಕಿಗಳ ರೂಪದಲ್ಲಷ್ಟೇ ಇದು ಕಾಣಸಿಗುತ್ತದೆ. 2009ರಲ್ಲಿ ‘ಕ್ರಿಪ್ಟೋಗ್ರಫಿ’ ಎಂಬ ತಂತ್ರಜ್ಞಾನ ಬಳಸಿ ಈ ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸಲಾಯಿತು. ಮಧ್ಯವರ್ತಿಗಳಿಲ್ಲದೆ, ಅತಿ ಕಡಿಮೆ ವರ್ಗಾವಣೆ ಶುಲ್ಕದಲ್ಲಿ ಇಲ್ಲಿ ಹಣಕಾಸಿನ ವಹಿವಾಟು ನಡೆಯುತ್ತದೆ. ಈ ಬಿಟ್ ಕಾಯಿನ್‌ಗಳನ್ನು ಬಳಕೆದಾರರೇ ಸೃಷ್ಟಿಸಬೇಕು. ಈ ಪ್ರಕ್ರಿಯೆಗೆ ‘ಮೈನಿಂಗ್’ ಎನ್ನಲಾಗುತ್ತದೆ. ಚಿನ್ನವನ್ನು ಗಣಿಗಾರಿಕೆ ಮಾಡುವಂತೆ ಬಿಟ್ ಕಾಯಿನ್‌ಗಳ ಗಣಿಗಾರಿಕೆ ನಡೆಯುತ್ತದೆ. ಇದಕ್ಕಾಗಿ ಕಂಪ್ಯೂಟರ್ ನೀಡುವ ದೊಡ್ಡ ದೊಡ್ಡ ಗಣಿತದ ಸಮಸ್ಯೆಗಳನ್ನು ಬಗೆಹರಿಸಬೇಕು. ಇದಕ್ಕೆ ‘ಹ್ಯಾಶ್ ಫಂಕ್ಷನ್’ ಎನ್ನಲಾಗುತ್ತದೆ. ಈ ಹಂತ ಪ್ರವೇಶಿಸಿದರೆ, ಬಿಟ್ ಕಾಯಿನ್ ವ್ಯವಹಾರ ನಡೆಸುವ ಕಂಪೆನಿ ಜತೆ ಸಂಪರ್ಕ ಸಾಧ್ಯವಾಗುತ್ತದೆ. ಆ ನಂತರ ಕಂಪೆನಿ ಹಾಗೂ ಗ್ರಾಹಕರ ನಡುವೆ ಗೋಪ್ಯ ವ್ಯವಹಾರ ನಡೆಯುತ್ತದೆ ಎನ್ನುತ್ತಾರೆ ಸೈಬರ್ ಪೊಲೀಸರು.

ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೆ ಅಂತಹವರ ಹೆಸರು ಹೇಳಿ. ಅಲ್ಲದೆ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ರಾಜ್ಯದ ತನಿಖಾ ಸಂಸ್ಥೆಗಳು ಪ್ರಕರಣದ ಸಮಗ್ರ ತನಿಖೆ ನಡೆಸಿವೆ. ಇದಾದ ಮೇಲೂ ಪ್ರಕರಣದ ತನಿಖೆಯನ್ನು ನಾವೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಿದ್ದೇವೆ.

- ಬಸವರಾಜ ಬೊಮ್ಮಾಯಿ, ಸಿಎಂ

ಬಿಟ್ ಕಾಯಿನ್ ದಂಧೆ ಬೊಮ್ಮಾಯಿ ಸರಕಾರಕ್ಕೆ ಕಂಟಕವಾಗಬಹುದು. ಇಂತಹ ಆರೋಪಗಳ ಬಗ್ಗೆ ಯಾವ ರೀತಿ ತನಿಖೆ ನಡೆಯಬೇಕು ಎಂಬ ಬಗ್ಗೆಯೇ ಗೊಂದಲ ಇದೆ. ಯಾವ ತನಿಖಾ ಸಂಸ್ಥೆಗಳ ಮೇಲೂ ವಿಶ್ವಾಸ ಉಳಿದಿಲ್ಲ. ಎಲ್ಲವೂ ಅವರ ಕಪಿಮುಷ್ಠಿಯಲ್ಲಿವೆ. ನ್ಯಾಯಾಲಯವೇ ಮಧ್ಯಪ್ರವೇಶ ಮಾಡಬೇಕು.

-ರಾಮಲಿಂಗಾರೆಡ್ಡಿ, ಮಾಜಿ ಗೃಹ ಸಚಿವ

ಡ್ರಗ್ಸ್, ಬಿಟ್ ಕಾಯಿನ್ ಪ್ರಕರಣ ಗಂಭೀರವಾಗಿದ್ದು, ಈ ಪ್ರಕರಣದ ಬಗ್ಗೆ ಸಿಐಡಿ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಪ್ರಕರಣದ ಬಗ್ಗೆ ಊಹಾಪೋಹ ಹೇಳಿಕೆಗಳನ್ನು ನೀಡಬಾರದು. ಡ್ರಗ್ಸ್ ಖರೀದಿ ಮತ್ತು ಬಿಟ್ ಕಾಯಿನ್ ಬಳಕೆ ಆಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ. ಪೊಲೀಸರು ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.

ಆರಗ ಜ್ಞಾನೇಂದ್ರ, ಗೃಹ ಸಚಿವ

►ಪತ್ತೆ ಹಚ್ಚುವುದಯ ಕಷ್ಟ?

ಯಾರೂ ವೈಯಕ್ತಿಕ ವಿವರ ನೀಡದೆ ಅನಾಮಿಕರಾಗಿಯೇ ವಹಿವಾಟು ನಡೆಸುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯ. ಯಾವುದೇ ರಾಷ್ಟ್ರದ ವಿದೇಶಾಂಗ ನೀತಿಗಳ, ಬ್ಯಾಂಕಿಂಗ್ ನಿಯಮಗಳ, ಆದಾಯ ತೆರಿಗೆ ಇಲಾಖೆಗಳ ಅಡ್ಡಿ–ಅತಂಕಗಳೂ ಇದಕ್ಕಿಲ್ಲ. ಹೀಗಾಗಿಯೇ ದಂಧೆಕೋರರಿಗೆ ಇದು ನೆಚ್ಚಿನ ತಾಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

► ತುಮಕೂರಿನಲ್ಲಿತ್ತು ಬಿಟ್ ಕಾಯಿನ್ ಎಟಿಎಂ

ಕಳೆದ ಮೂರು ವರ್ಷಗಳ ಹಿಂದೆ ಯುನೋಕಾಯಿನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ದೇಶದಲ್ಲೇ ಮೊದಲ ಬಿಟ್ ಕಾಯಿನ್ ಎಟಿಎಂ ಘಟಕ ಪ್ರಾರಂಭಿಸಿದ್ದ ತುಮಕೂರಿನ ಬಿ.ವಿ.ಹರೀಶ್(37) ಎಂಬುವರನ್ನು ಬಂಧಿಸಿದ್ದ ಸೈಬರ್ ಕ್ರೈಂ ಪೆÇಲೀಸರು, ಘಟಕ ಪ್ರಾರಂಭವಾದ ಮೂರು ದಿನಗಳಲ್ಲೇ ಅದಕ್ಕೆ ಬೀಗ ಜಡಿದಿದ್ದರು.

ಡಿಜಿಟಲ್ ಕರೆನ್ಸಿ ವ್ಯವಹಾರಕ್ಕೆ ಸುಪ್ರೀಂ ಕೋರ್ಟ್‍ನ ನಿಬರ್ಂಧವಿದ್ದರೂ, ಯುನೋಕಾಯಿನ್ ಕಂಪನಿಯು ಬಿಟ್ ಕಾಯಿನ್ ಘಟಕ ಪ್ರಾರಂಭಿಸಿತ್ತು ಎನ್ನುವ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News