ಗೌರಿ ಲಂಕೇಶ್ ಕೊಲೆ ಪ್ರಕರಣ: 18 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ ಬೆಂಗಳೂರಿನ ನ್ಯಾಯಾಲಯ

Update: 2021-10-31 09:31 GMT

ಬೆಂಗಳೂರು, ಅ. 31: ಬೆಂಗಳೂರಿನ ವಿಶೇಷ ನ್ಯಾಯಾಲಯವು ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ 18 ಆರೋಪಿಗಳ ವಿರುದ್ಧ ಶನಿವಾರ ಆರೋಪಗಳನ್ನು ರೂಪಿಸಿದೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಲಾಪದಲ್ಲಿ ಆರೋಪಿಗಳಿಗೆ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಆರೋಪಗಳನ್ನು ಓದಿ ಹೇಳಲಾಗಿತ್ತು.

ಅಮೋಲ್ ಕಾಳೆ, ಪರಶುರಾಮ್ ಅಶೋಕ ವಾಘ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬದ್ದಿ, ಅಮಿತ್ ದಿಗ್ವೇಕರ್,ಭಾರತ್ ಕುರಣೆ,ಸುರೇಶ ಎಚ್.ಎಲ್.ಅಲಿಯಾಸ್ ಟೀಚರ್,ರಾಜೇಶ್ ಡಿ.ಬಂಗೇರಾ ಅಲಿಯಾಸ್ ಸರ್, ಸುಧನ್ವ ಗೊಂದಲೇಕರ್ ಅಲಿಯಾಸ್ ಪಾಂಡೆಜಿ ಅಲಿಯಾಸ್ ಓಂಡಿ ಅಲಿಯಾಸ್ ಗುಜ್ಜರ್ ಅಲಿಯಾಸ್ ಮಹೇಶ್ ಪಾಟೀಲ್, ಶರದ್ ಅಲಿಯಾಸ್ ಶರದ್ ಭಾವುಸಾಹಿಬ್ ಕಲಾಸ್ಕರ್ ಅಲಿಯಾಸ್ ಛೋಟು,ಎನ್.ಮೋಹನ ನಾಯಕ್ ಅಲಿಯಾಸ್ ಸಂಪಂಜೆ,ವಾಸುದೇವ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್,ಸುಜಿತ್ ಕುಮಾರ್ ಅಲಿಯಾಸ್ ಸುಜಿತ್ ಎಸ್.ಆರ್.ಅಲಿಯಾಸ್ ಸಂಜಯ ಅಲಿಯಾಸ್  ಮಂಜುನಾಥ,ಮನೋಹರ ದುಂಡೆಪ್ಪಾ ಯಾದೆವ್ ಅಲಿಯಾಸ್ ಮನೋಹರ ಯಾದೆವ್ ಅಲಿಯಾಸ್ ಮನೋಜ,ವಿಕಾಸ ಪಾಟೀಲ ಅಲಿಯಾಸ್ ದಾದಾ ಅಲಿಯಾಸ್ ನಿಹಾಲ್,ಶ್ರೀಕಾಂತ ಜಗನ್ನಾಥ್ ಪಾಂಗರಕರ್ ಅಲಿಯಾಸ್ ಪ್ರಾಜೀ,ಕೆ,ಟಿ.ನವೀನ್ ಕುಮಾರ ಅಲಿಯಾಸ್ ನವೀನ್ ಮತ್ತು ಋಷಿಕೇಶ ದೇವಾಡಕರ್ ಅಲಿಯಾಸ್ ಮುರಳಿ ಅಲಿಯಾಸ್ ಶಿವಾ ಅವರ ವಿರುದ್ಧ ಐಪಿಸಿ, ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆಯ ವಿವಿಧ ಕಲಮ್ಗಳಡಿ ಆರೋಪಗಳನ್ನು ರೂಪಿಸಲಾಗಿದೆ.

ಆರೋಪಿಗಳು ವಿವಿಧ ಜೈಲುಗಳಲ್ಲಿದ್ದು,ವಿಚಾರಣೆ ಸಂದರ್ಭ ಎಲ್ಲ ಆರೋಪಿಗಳು ಹಾಜರಾಗುತ್ತಿರಲಿಲ್ಲ. ಹೀಗಾಗಿ ಆರೋಪಗಳನ್ನು ರೂಪಿಸುವ ಕಲಾಪ ಮುಂದೂಡಲ್ಪಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಬಿ.ಕಟ್ಟಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆರೋಪಗಳನ್ನು ರೂಪಿಸಲು ಬಳ್ಳಾರಿ,ತುಮಕೂರು,ಮೈಸೂರು ಮತ್ತು ಶಿವಮೊಗ್ಗ ಜೈಲುಗಳಿಂದ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರುವಂತೆ ಸೆ.22ರಂದು ಆದೇಶಿಸಿದ್ದರು.

 ಈ ಕೈದಿಗಳ ಜೊತೆಗೆ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ ಆರೋಪಿಗಳನ್ನೂ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
2017, ಸೆ.5ರಂದು ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ನ್ಯಾಯಾಲಯವು ಡಿ.8ರಂದು ಪ್ರಕರಣದ ವಿಚಾರಣೆಯ ಆರಂಭಕ್ಕೆ ದಿನಾಂಕವನ್ನು ನಿಗದಿಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News