ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-10-31 13:05 GMT

ಬೆಂಗಳೂರು, ಅ.31: ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 20 ಲಕ್ಷ ಜನರು ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದೆಲ್ಲವನ್ನೂ ನಿಯಂತ್ರಣ ಮಾಡುವುದರಲ್ಲಿ ಪೊಲೀಸರ ಶ್ರಮ ಬಹಳ ಇದೆ ಎಂದರು.

ಬೆಂಗಳೂರು ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಸೆಂಟ್ರಲ್ ಫೋರ್ಸ್ ಜೊತೆಗೆ 50 ಕೆಎಸ್‍ಆರ್‍ಪಿ ತುಕಡಿ ಸೇರಿದಂತೆ ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರಕಾರಕ್ಕೆ ಸಹಕಾರ ನೀಡಿದ್ದಾರೆ. ರಾಜ್‍ಕುಮಾರ್ ಅವರ ಕುಟುಂಬ ಸರಕಾರಕ್ಕೆ ಸಹಕಾರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಗಾಯಾಲು ಪೇದೆಯ ಆರೋಗ್ಯ ವಿಚಾರಣೆ: ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ವೇಳೆ ಕರ್ತವ್ಯ ನಿರ್ವಹಿಸುವ ವೇಳೆ ಜನರ ನೂಕು ನುಗ್ಗಲಿನಲ್ಲಿ ಕೆಳಗೆ ಬಿದ್ದು ಕಾಲು ಮುರಿತಕ್ಕೆ ಒಳಗಾದ, ಮಡಿವಾಳ ಪೊಲೀಸ್ ಠಾಣೆಯ ಪೇದೆ ಗಣೇಶ್ ನಾಯಕ್ ಆರೋಗ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಚಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News