×
Ad

ದೇಶದ ಪ್ರಗತಿಯಲ್ಲಿ ಇಂದಿರಾಗಾಂಧಿ-ಸರ್ದಾರ್ ಪಟೇಲ್ ಪಾತ್ರ ಪ್ರಮುಖ:ಸಿದ್ದರಾಮಯ್ಯ

Update: 2021-10-31 20:08 IST

ಬೆಂಗಳೂರು, ಅ.31: ಮಾಜಿ ಪ್ರಧಾನಿ ಇಂದಿರಾಗಾಂಧಿ ಹುತಾತ್ಮರಾದ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ  ಕಾಕತಾಳೀಯವಾಗಿ ಎರಡು ಒಂದೇ ದಿನವಾಗಿದೆ. ಇಂದಿರಾ ಗಾಂಧಿ ಅವರನ್ನು ಉಕ್ಕಿನ ಮಹಿಳೆ ಎಂದರೆ, ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಇಂದಿರಾ ಗಾಂಧಿ ಈ ದೇಶ ಕಂಡ ಅಪ್ರತಿಮ ನಾಯಕಿ. 16 ವರ್ಷಗಳ ಕಾಲ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಬಾಲ್ಯದಿಂದ ಅಪಾರ ದೇಶ ಭಕ್ತಿ ಬೆಳೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರ ಜತೆಯಲ್ಲೇ ಬೆಳೆದಿದ್ದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹುತಾತ್ಮ ದಿನ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಲ್ಲಭಭಾಯಿ ಪಟೇಲ್ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿ ನಂತರ ದೇಶದ ಪ್ರಧಾನಿಯಾದ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದಲ್ಲೇ ಸಾಕಷ್ಟು ವಿರೋಧ ಎದುರಿಸಿದರು. 1969 ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು. ನಿಜಲಿಂಗಪ್ಪ ಸಿಂಡಿಕೇಟ್ ಬಣದ ನಾಯಕರಾದರೆ, ಇಂದಿರಾ ಗಾಂಧಿ ಇನ್ನೊಂದು ಬಣದ ನಾಯಕತ್ವ ವಹಿಸಿಕೊಂಡರು. ಆ ನಂತರದಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಹಾಗೂ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ ರೀತಿ ಆದರ್ಶಪ್ರಾಯವಾದುದ್ದು ಎಂದರು. 

ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಗರೀಬಿ ಹಠಾವೋ ಘೋಷಣೆಯ ಮೂಲಕ ಬಡಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಮಹಿಳೆಯರಿಗೆ, ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯ ಒಡೆತನ ಸಿಗುವಂತೆ ಮಾಡಿದರು. ರಾಜಧನ ರದ್ದು, ಬ್ಯಾಂಕುಗಳ ರಾಷ್ಟ್ರೀಕರಣ ಇವರ ಕಾಲದ ಪ್ರಮುಖ ಸುಧಾರಣೆಗಳಾಗಿವೆ. ಬಡವರಿಗೆ ಬ್ಯಾಂಕುಗಳ ಸೌಲಭ್ಯ ಸಿಗುವಂತೆ ಮಾಡಿದವರು ಇಂದಿರಾ ಗಾಂಧಿ. ಈ ಎಲ್ಲ ಕಾರ್ಯಕ್ರಮಗಳ ಪರಿಣಾಮವಾಗಿ ಜನ ಅವರನ್ನು ದೇವತೆಯಂತೆ ಕಾಣುತ್ತಿದ್ದರು ಎಂದು ಅವರು ಹೇಳಿದರು.

1978ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಜನತಾ ಪಕ್ಷದ ಮೈಸೂರು ತಾಲೂಕು ಘಟಕದ ಅಧ್ಯಕ್ಷನಾಗಿದ್ದೆ. ರಾಜಶೇಖರ ಮೂರ್ತಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಯಾಗಿದ್ದರು. ನಾನು ಮತ್ತು ಅವರು ಹಾರೋಹಳ್ಳಿ ಎಂಬ ಹರಿಜನರ ಕಾಲೋನಿಗೆ ಮತ ಕೇಳಲು ಹೋಗಿದ್ದೆವು. ಆಗ ಆ ಊರಿಗೆ ದೇವಸ್ಥಾನ ಕಟ್ಟಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಶೇಖರ ಮೂರ್ತಿ ಊರಿನವರೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಅವರು ಹೇಳಿದರು.

ನಾನು ಊರನ್ನು ನೋಡಿ ಬರೋಣ ಎಂದು ಹೊರಟು ಮನೆಗಳಿಗೆ ಹೋಗಿದ್ದೆ, ಅಲ್ಲಿನ ಪ್ರತಿ ದಲಿತರ ಮನೆಯಲ್ಲಿ ಇಂದಿರಾ ಗಾಂಧಿ ಭಾವಚಿತ್ರವಿತ್ತು. ಜಯ ದೇವರಾಜ ಅರಸು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರನ್ನು ಮತ ಕೇಳಲು ಯಾವ ಊರಿನ ಒಳಗೂ ಬಿಟ್ಟಿರಲಿಲ್ಲ, ಆದರೆ ಫಲಿತಾಂಶ ನೋಡಿದರೆ ಆ ಚುನಾವಣೆಯಲ್ಲಿ ಜಯ ದೇವರಾಜ ಅರಸು ಗೆದ್ದಿದ್ದರು. ಅಷ್ಟರ ಮಟ್ಟಿಗೆ ಇಂದಿರಾ ಗಾಂಧಿ ಬಡವರ ಮನಸ್ಸಿನಲ್ಲಿ ನೆಲೆಯೂರಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

1970, 80ರ ದಶಕದಲ್ಲಿ ಇಂದಿರಾ ಗಾಂಧಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾಗಿದ್ದವರು, ಅದರಲ್ಲೂ ವಿಶೇಷವಾಗಿ ಸಮಾಜದ ಬಡವರ್ಗದ ಜನ ಅವರನ್ನು ದೇವರಂತೆ ಕಾಣುತ್ತಿದ್ದರು. ರಾಜಕಾರಣಿಗಳಿಗೆ ಇಂತಹಾ ವಿಶೇಷ ಸ್ಥಾನಮಾನ, ಗೌರವ ಸಿಗುವುದು ಬಲು ಅಪರೂಪ. ಒಮ್ಮೆ ಹುಣಸೂರಿನ ಶಾಸಕ ಪ್ರೇಮ್ ಕುಮಾರ್ ಅವರ ರೂಮಿನಲ್ಲಿ ಎಫ್.ಎಂ.ಖಾನ್ ಅವರ ಜೊತೆ ಕೂತಿದ್ದಾಗ ಯಾರೋ ಒಬ್ಬ ಬಂದು ಚುನಾವಣೆಗೆ ಹಣ ಬೇಕು ಎಂದು ಕೇಳಿದ ಆಗ ಖಾನ್ ಹಣ ಯಾಕಪ್ಪ ಬೇಕು? ಸುಮ್ಮನೆ ಹೋಗಿ ಇಂದಿರಾ ಗಾಂಧಿ ಫೆÇೀಟೋ ಮತ್ತು ಕರಪತ್ರ ಕೊಡಿ ಸಾಕು ಎಂದರು. ಕೊನೆಗೆ ಫಲಿತಾಂಶ ನೋಡಿ ನನಗೂ ಆಶ್ಚರ್ಯವಾಯ್ತು. ಅವರು 28ರಲ್ಲಿ 27 ಸ್ಥಾನಗಳನ್ನು ಗೆದ್ದಿದ್ದರು. ಆಗ ಬಂಗಾರಪ್ಪ ಅಧ್ಯಕ್ಷರಾಗಿದ್ದರು, ಗುಂಡೂರಾವ್ ವಿರೋಧ ಪಕ್ಷದ ನಾಯಕರಾಗಿದ್ದರು ಎಂದು ಅವರು ಮೇಲುಕು ಹಾಕಿದರು.

ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದ ಅಧೀನದಿಂದ ಮುಕ್ತಿಗೊಳಿಸಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯಿತು. ನಂತರ ಬಾಂಗ್ಲಾದೇಶದ ವಿಮೋಚನೆಯಾಯಿತು. ಆ ಸಮಯದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿಯನ್ನು ದುರ್ಗೆ ಎಂದು ಕರೆದಿದ್ದರು. ಅವರ ಧೈರ್ಯ ಮತ್ತು ದಿಟ್ಟತನದ ನಿರ್ಧಾರಗಳಿಂದಾಗಿ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದರು. ತೀರ ಬಡತನದಲ್ಲಿದ್ದ ರೈತ ಕುಟುಂಬದಲ್ಲಿ ಜನಿಸಿದ ಅವರು ತಡವಾಗಿ ಶಿಕ್ಷಣ ಸಿಕ್ಕಿದ್ದರಿಂದ ತಮ್ಮ 22ನೇ ವಯಸ್ಸಿಗೆ ಎಸೆಸೆಲ್ಸಿ ಉತ್ತೀರ್ಣಗೊಂಡು, ಕಾನೂನು ಪದವಿ ಪಡೆದು, ವಕೀಲರಾಗಿ ಕೆಲಸ ಮಾಡುತ್ತಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು ಎಂದು ಅವರು ತಿಳಿಸಿದರು. 

ಒಮ್ಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಯಾಲಯದಲ್ಲಿ ವಾದ ಮಾಡುತ್ತಾ ಇರುವಾಗ ಯಾರೋ ಒಬ್ಬರು ಬಂದು ಒಂದು ಚೀಟಿ ಕೊಡುತ್ತಾರೆ, ಅದರಲ್ಲಿ ನಿಮ್ಮ ಪತ್ನಿ ಕಾಲವಾಗಿದ್ದಾರೆ ಎಂದು ಬರೆದಿರುತ್ತದೆ. ಆದರೂ ಅವರು ಸ್ವಲ್ಪವೂ ವಿಚಲಿತರಾಗದೆ ತಮ್ಮ ವಾದ ಮುಂದುವರೆಸಿದರು. ನಂತರ ಪತ್ನಿಯ ಶವ ನೋಡಲು ಹೋಗಿದ್ದರು. ಇಷ್ಟರ ಮಟ್ಟಿನ ಕರ್ತವ್ಯ ನಿಷ್ಠೆ ಅವರಿಗಿತ್ತು ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. 

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ 565 ಸಂಸ್ಥಾನಗಳು ಇದ್ದಾವೆ, ಇವೆಲ್ಲ ಒಂದುಗೂಡುವುದು ಅಸಾಧ್ಯ ಎಂದು ಬ್ರಿಟೀಷರು ಭಾವಿಸಿದ್ದರು. ಆಗ ಪಟೇಲರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಈ ಎಲ್ಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಿದ ರೀತಿ ಅವಿಸ್ಮರಣೀಯ. ಮಾತುಕತೆ, ರಾಜಿ ಸಂಧಾನ, ಬಲಪ್ರಯೋಗ ಮೂರು ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ದೇಶ ಒಗ್ಗೂಡಿಸುವ ಕಾರ್ಯ ಮಾಡಿದರು. ಜಮ್ಮು ಕಾಶ್ಮೀರ, ಹೈದರಾಬಾದ್, ತಮಿಳುನಾಡು ಮುಂತಾದವುಗಳನ್ನು ಬಲ ಪ್ರಯೋಗದಿಂದ ಒಗ್ಗೂಡಿಸಿದ್ದು. ಇಂತಹಾ ಅತ್ಯಂತ ಕ್ಲಿಷ್ಟಕರವಾದ ಕೆಲಸವನ್ನು ಮಾಡುವುದು ಸಾಮಾನ್ಯ ನಾಯಕರಿಂದ ಆಗದ ಕೆಲಸ ಎಂದು ಅವರು ಬಣ್ಣಿಸಿದರು. 

ಬಿಜೆಪಿಯವರು ಪಟೇಲರ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನೆಹರು ಅವರಿಗೆ ಅಗೌರವ ತೋರಿ, ಪಟೇಲರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು ಎಂದು ಅಪಪ್ರಚಾರ ಮಾಡುವ ಮೂಲಕ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದ ನರೇಂದ್ರ ಮೋದಿ ದೇಶದ ಸ್ವಾತಂತ್ರ್ಯದ ಬಗ್ಗೆ, ದೇಶಭಕ್ತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡಿ ತಮ್ಮಿಂದಲೇ ದೇಶ ಉಳಿದಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಬಿಜೆಪಿಯವರು ಢೋಂಗಿ ದೇಶಭಕ್ತರು. ಕಾಂಗ್ರೆಸ್ ನವರು ಮಾತ್ರ ದೇಶಕ್ಕಾಗಿ ಪ್ರಾಣ, ಆಸ್ತಿ ಪಾಸ್ತಿ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಗೂ ಮತ್ತು ಬಿಜೆಪಿಗೂ ಇರುವ ವ್ಯತ್ಯಾಸ ಎಂದು ಸಿದ್ದರಾಂಯ್ಯ ತಿಳಿಸಿದರು.

ದೇಶಕಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂದು ನಮ್ಮನ್ನೇ ಕೇಳುತ್ತಾರೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಆಗಲು ರಾಜೀವ್ ಗಾಂಧಿ ಕಾರಣ, ನರೇಂದ್ರ ಮೋದಿ ಪ್ರಧಾನಿಯಾಗಿರುವುದೇ ಕಾಂಗ್ರೆಸ್ ನವರಿಂದ. ಕಾಂಗ್ರೆಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಡದೆ ಇದ್ದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬರುತ್ತಿತ್ತಾ? ಮೋದಿ ಪ್ರಧಾನಿ ಆಗುತ್ತಿದ್ದರಾ? ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ರಾಣಿ ಸತೀಶ್, ಉಮಾಶ್ರೀ, ಎಚ್.ಎಂ.ರೇವಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News