ಐಸಿಸಿ ಟಿ-20 ವಿಶ್ವಕಪ್: ನಿರ್ಗಮನ ದ್ವಾರದ ಸನಿಹದಲ್ಲಿ ಭಾರತ

Update: 2021-11-01 04:56 GMT
ಫೋಟೊ - BCCI

ದುಬೈ: ಭಾರತದ ಸೂಪರ್‌ ಸ್ಟಾರ್ ಕ್ರಿಕೆಟರ್‌ ಗಳು ರವಿವಾರ ನ್ಯೂಝಿಲೆಂಡ್‌ನ ಶಿಸ್ತಿನ ಆಟಕ್ಕೆ ತಲೆಬಾಗಿ ಎಂಟು ವಿಕೆಟ್‌ಗಳ ಸೋಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಭಾರತದ ವಿಶ್ವಕಪ್ ಅಭಿಯಾನ ಬಹುತೇಕ ಅಂತ್ಯಗೊಂಡಂತಾಗಿದೆ.

ಈ ಸೋಲಿನೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದ್ದು, ಟಿ-20 ನಾಯಕರಾಗಿ ನಿರ್ಗಮಿಸುತ್ತಿರುವ ವಿರಾಟ್ ಕೊಹ್ಲಿ ಸತತ ನಾಲ್ಕನೇ ಪ್ರಯತ್ನದಲ್ಲಿ ಕೂಡಾ ಐಸಿಸಿ ಟೂರ್ನಿ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾದಂತಾಗಿದೆ.

ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ್ದು, ಈ ಸೋಲು ಅವರು ಏಕದಿನ ನಾಯಕತ್ವದ ಭವಿಷ್ಯ ಕೂಡಾ ಡೋಲಾಯಮಾನವಾಗುವಂತಾಗಿದೆ. ಪಾಕಿಸ್ತಾನ ಜತೆಗಿನ ಸೋಲು, ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೂಡಾ ಸವಾಲಿನ ಮೊತ್ತವನ್ನೂ ಒಡ್ಡದಿದ್ದುದು ಇರಿಸು ಮುರಿಸಿಗೆ ಕಾರಣವಾಗಿದೆ. ಭಾರತದ 111 ರನ್‌ಗಳ ಸಾಧಾರಣ ಮೊತ್ತವನ್ನು ನ್ಯೂಝಿಲೆಂಡ್‌ನ ಡೆರಿಲ್ ಮೈಕೆಲ್ (49) ಮತ್ತು ಕೇನ್ ವಿಲಿಯಂಸನ್ (33 ನಾಟೌಟ್) ಕೇವಲ 14.3 ಓವರ್‌ಗಳಲ್ಲಿ ಬೆನ್ನಟ್ಟಿ ಗೆಲುವು ಕಸಿದುಕೊಂಡರು.

ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದ್ದು, ಒಂಬತ್ತು ಓವರ್‌ಗಳಲ್ಲಿ ಅಂದರೆ 54 ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ವಿಫಲವಾಯಿತು. ಜತೆಗೆ 8 ರಿಂದ 15ನೇ ಓವರ್‌ವರೆಗೆ ಸ್ಪಿನ್ ದಾಳಿಯಲ್ಲಿ ಒಂದು ಬೌಂಡರಿ ಕೂಡಾ ಗಳಿಸಲು ಸಾಧ್ಯವಾಗಲಿಲ್ಲ.

ಭಾರತ ಸೆಮಿಫೈನಲ್ ಏರಲು ಇರುವ ಏಕೈಕ ಸಾಧ್ಯತೆಯೆಂದರೆ, ನ್ಯೂಝಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಗೆಲುವು ಸಾಧಿಸುವುದು. ಇದರ ನಡುವೆಯೂ ಭಾರತ ಅಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಹೀಗೆ ಎಲ್ಲ ತಂಡಗಳ ವಿರುದ್ಧವೂ ಭಾರೀ ಅಂತರದ ಗೆಲುವು ಸಾಧಿಸಬೇಕು. ಆಗ ಮಾತ್ರ ಭಾರತಕ್ಕೆ ಸೆಮಿಫೈನಲ್ ಬಾಗಿಲು ತೆರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News