ದೀಪಾವಳಿ ಹಬ್ಬಕ್ಕೆ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊರಿಂದ ಶುಭಾಶಯ
Update: 2021-11-03 21:04 IST
ಬೆಂಗಳೂರು, ನ.3: ದೈವೀಕ ಬೆಳಕು ಸ್ವಾರ್ಥದ ಕತ್ತಲೆಯನ್ನು ದೂರ ಮಾಡಿ, ಸಂತೋಷ ಮತ್ತು ಭರವಸೆಯನ್ನು ಹೊತ್ತಿಸುತ್ತದೆ ಎಂದು ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಹೇಳಿದ್ದಾರೆ.
ಬೆಂಗಳೂರಿನ ಮೆಟ್ರೊಪಾಲಿಟನ್ ಆರ್ಚ್ ಬಿಷಪ್ ಹಾಗೂ ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರೂ ಆಗಿರುವ ಬಿಷಪ್ ಡಾ. ಪೀಟರ್ ಮಚಾದೊ ಅವರು, ಕರ್ನಾಟಕದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದು, ಜಗತ್ತಿನ ಎಲ್ಲ ಧರ್ಮಗಳೂ ಸ್ವಾರ್ಥ, ಅಸೂಯೆ, ವೈರತ್ವ ಮತ್ತು ದ್ವೇಷವನ್ನು ಹೋಗಲಾಡಿಸಿ, ಸಾರ್ಥಕ ಬದುಕನ್ನು ಜೀವಿಸಲು ನಮ್ಮೊಳಗೆ ಪ್ರೀತಿ, ಕರುಣೆ ಮತ್ತು ಭರವಸೆಯ ಬೆಳಕನ್ನು ತುಂಬುವ ದೈವೀಕಜ್ಯೋತಿಯ ಕುರಿತು ಬೋಧಿಸುತ್ತವೆ ಎಂದಿದ್ದಾರೆ.
ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವವರ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಮಾನವೀಯ ಸಂಬಂಧಗಳು ಗಟ್ಟಿಯಾಗಿ, ಮತ್ತಷ್ಟು ವೃದ್ಧಿಸಲಿ ಎಂದು ಪ್ರಾರ್ಥಿಸಿದರು.