ಬೆಂಗಳೂರು; ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಬೆಂಗಳೂರು, ನ.3: ‘ದಲಿತರು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ, ದಲಿತರ ಕುರಿತು ಆಕ್ಷೇಪಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯ ಸಾರ್ವಜನಿಕರ ಮತ್ತು ಬಿಜೆಪಿಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
ಬುಧವಾರ ನಗರದ ಮೌರ್ಯ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಪಿ.ರಾಜೀವ್, ಬಿಜೆಪಿ ಸರಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ದಲಿತರು ಮತ್ತು ಹಿಂದುಳಿದ ವರ್ಗದವರು ಸಹಜವಾಗಿಯೇ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಸಿದ್ದರಾಮಯ್ಯರ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ಅತ್ಯಂತ ನೋವಾಗಿದೆ. ಆದುದರಿಂದ, ಅವರು ಕೂಡಲೇ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಮಾತನಾಡಿ, ಸಿದ್ದರಾಮಯ್ಯ ಬಿಜೆಪಿ ಕ್ಷಮೆ ಕೇಳಬೇಕು. ಕಾಂಗ್ರೆಸ್ ಪಕ್ಷದ ತಿರಸ್ಕಾರಕ್ಕೆ ಜನರು ಮುಂದಾಗಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದರು.
ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಂದ್ರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಅನ್ನೋ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನು ಕಾಂಗ್ರೆಸ್ ಆಳುತ್ತಾ ಬಂದಿತ್ತು. ಆದರೆ ಈಗ ಒಬ್ಬೊಬ್ಬ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನು ಕಳೆದುಕೊಂಡು ಸೋಲುತ್ತಾ ಬಂದಿದೆ. ಸಿದ್ದರಾಮಯ್ಯಗೆ ಭವಿಷ್ಯದಲ್ಲಿ ಇನ್ನಷ್ಟು ಸೋಲು ಕಾದಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಪ್ರಭಾರಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ, ಎಂಸಿಎ ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಮಂಜುನಾಥ್, ಉತ್ತರ ಜಿಲ್ಲೆಯ ಅಧ್ಯಕ್ಷ ಮುನಿರಾಜು ಮತ್ತು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಶ್ರೀನಿವಾಸ್ ಹಾಗೂ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.