ಬೆಂಗಳೂರು: ಸರಕಾರದ ಮಾರ್ಗಸೂಚಿ ಉಲ್ಲಂಘಿಸಿದ 32 ಟೋಯಿಂಗ್ ವಾಹನಗಳ ಪರವಾನಿಗೆ ರದ್ದು
ಬೆಂಗಳೂರು, ನ.3: ನಗರದ ನಿಷೇಧಿತ ಪ್ರದೇಶಗಳಲ್ಲಿ ವಾಹನ ಟೋಯಿಂಗ್ ಸೋಗಿನಲ್ಲಿ ಟೋಯಿಂಗ್ ಮಾಡಿದ್ದ ಆರೋಪ ಸಂಬಂಧ 32 ಟೋಯಿಂಗ್ ವಾಹನ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ವಾಹನ ಸವಾರರೊಂದಿಗೆ ದುರ್ನಡತೆ, ಟೋಯಿಂಗ್, ವಾಹನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು, ಧ್ವನಿವರ್ಧಕದಲ್ಲಿ ಪ್ರಚಾರ ಮಾಡದಿರುವುದು ಸೇರಿದಂತೆ ವಿವಿಧ ಟೋಯಿಂಗ್ ಮಾನದಂಡ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 32 ಟೋಯಿಂಗ್ ವಾಹನ ಪರವಾನಿಗೆ ರದ್ದು ಮಾಡಲಾಗಿದೆ.
ಸಾರ್ವಜನಿಕರಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆಯು ದೂರುಗಳು ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಟೋಯಿಂಗ್ ಮಾನದಂಡ ಉಲ್ಲಂಘನೆ ಬಗ್ಗೆ ಆಯಾ ವಿಭಾಗದ ಡಿಸಿಪಿಗಳಿಗೆ ವರದಿ ಕೇಳಿದ್ದರು.
ಇದರಂತೆ ಪಶ್ವಿಮ ವಿಭಾಗದ ಸಂಚಾರಿ ವಿಭಾಗದ ಡಿಸಿಪಿ ಕುಲದೀಪ್‍ಕುಮಾರ್ ಜೈನ್ 20ಕ್ಕೂ ಹೆಚ್ಚು ವಾಹನಗಳು ಹಾಗೂ ದುರ್ನಡತೆ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದರು. ಅದೇರೀತಿ ಎಲ್ಲ್ಲ ಡಿಸಿಪಿಗಳು ವರದಿ ನೀಡಿದ್ದರು. ಇದರಂತೆ ಟೋಯಿಂಗ್ ಮಾರ್ಗಸೂಚಿ ಉಲ್ಲಂಘಿಸಿದ 32 ವಾಹನಗಳ ಪರವಾನಿಗೆ ರದ್ದು ಮಾಡಿ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.