ಬೆಂಗಳೂರು; ದೀಪಾವಳಿ ಬಳಿಕ ಊಟ, ತಿಂಡಿಯ ಬೆಲೆ ಏರಿಕೆ: ಹೋಟೆಲ್ ಮಾಲಕರ ಸಂಘ
Update: 2021-11-04 20:27 IST
ಬೆಂಗಳೂರು, ನ.4: ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್‍ಗಳಲ್ಲಿ ತಿಂಡಿ, ಊಟದ ದರ ಮುಂದಿನ ವಾರದಿಂದಲೇ ಹೆಚ್ಚಾಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ರೀತಿ ಇಂಧನದ ಬೆಲೆ ಏರುತ್ತಿರುವುದರಿಂದ ಎಲ್ಲ ಅಗತ್ಯ ವಸ್ತುಗಳು, ತರಕಾರಿ, ಧವಸ ಧಾನ್ಯಗಳ ಬೆಲೆ ಕೂಡ ಬಹಳಷ್ಟು ಹೆಚ್ಚುತ್ತಿದೆ. ಇದರ ಜೊತೆಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಬೆಲೆಯೂ ಕೂಡ ಏರಿದೆ ಎಂದು ಪಿ.ಸಿ.ರಾವ್ ಹೇಳಿದ್ದಾರೆ.
ಈ ರೀತಿಯ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬೀಳುತ್ತಿದೆ. ಹೀಗಾಗಿ, ಇದನ್ನು ಸರಿದೂಗಿಸಲು ದೀಪಾವಳಿ ಬಳಿಕ ತಿಂಡಿ, ಊಟದ ಬೆಲೆಯಲ್ಲಿ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.