ಸರ್ವಾಧಿಕಾರದ ಕರಿನೆರಳು?

Update: 2021-11-05 06:13 GMT

ಭಾರತ ಬಹು ಸಂಸ್ಕೃತಿಯ ದೇಶ. ಈ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಿತ್ತು. ಆದರೆ ಆಗಲಿಲ್ಲ ಯಾಕೆ? ಇದಕ್ಕೆ ಉತ್ತರವನ್ನು ನಮ್ಮ ಜಾತಿ ವ್ಯವಸ್ಥೆಯಲ್ಲಿ ಕಂಡುಕೊಳ್ಳಬೇಕು. ಭಾರತದ ಚುನಾವಣೆ ಎಂದರೆ ಬಹುತೇಕವಾಗಿ ಪ್ರಬಲ ಜಾತಿಗಳ ನಡುವಿನ ಪೈಪೋಟಿ. ಪಕ್ಷ ಯಾವುದೇ ಇರಲಿ, ಪ್ರಬಲ ಜಾತಿ ಅಭ್ಯರ್ಥಿಗಳ ಶೀಲ ಹೇಗೆ ಇರಲಿ ಅವರು ಗೆಲ್ಲುತ್ತಾರೆ. ಗೆದ್ದ ಬಳಿಕ ಜಾತಿಯ ಪರವಾಗಿ ನಿಲ್ಲುತ್ತಾರೆ.


ನಮ್ಮ ಜನರು ಪ್ರಜಾ ಪ್ರಭುತ್ವಕ್ಕಿಂತ ಹೆಚ್ಚಾಗಿ ಸರ್ವಾ ಧಿಕಾರವನ್ನು ಪ್ರೀತಿ ಸುತ್ತಿದ್ದಾರೇನೋ ಎಂಬ ಸಂಶಯವೊಂದು ನನ್ನನ್ನು ಬಹುಕಾಲದಿಂದ ಕಾಡುತ್ತಿದೆ. ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಮೌಲ್ಯ ರಾಹಿತ್ಯ ಸ್ಥಿತಿಗಳನ್ನು ನೋಡಿ ಬ್ರಿಟಿಷರ ಆಡಳಿತವೇ ಚೆನ್ನಿತ್ತು ಎಂತಲೋ ರಾಜ ಮಹಾರಾಜರುಗಳ ಕಾಲದಲ್ಲಿ ಹೀಗಿರಲಿಲ್ಲವಂತೆ ಎಂದೋ, ಹೇಳುವವರು ನಮ್ಮ ಸುತ್ತು ಮುತ್ತ ಸಾಕಷ್ಟು ಕಾಣ ಸಿಗುತ್ತಾರೆ. ಭಾರತದಲ್ಲಿ ಸದ್ಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ ಪ್ರತಿ ಪಕ್ಷಗಳ ಅಸ್ಥಿರತೆಯ ಸ್ಥಿತಿಯನ್ನು ನೋಡಿದಾಗ ಒಂದು ಪಕ್ಷದ ಸರ್ವಾಧಿಕಾರ ಸ್ಥಿತಿ ಬಂದು ಬಿಡಬಹುದೇ ಎಂಬ ಆತಂಕ ಕಾಡುತ್ತಿದೆ. ವಿಶ್ವದ ಮೇಲೆ ಸರ್ವಾಧಿಕಾರದ ಕರಿನೆರಳು ಬೀಳತೊಡಗಿದ್ದು ಇಂದು ನಿನ್ನೆಯ ಕತೆಯಲ್ಲ. ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮವಾಗಲೀ, ಫ್ರೆಂಚ್ ರಶ್ಯ ಮತ್ತು ಚೀನಾ ಕ್ರಾಂತಿಗಳಾಗಲೀ ನಡೆದದ್ದು ಸರ್ವಾಧಿಕಾರದ ವಿರುದ್ಧವೇ. ರಶ್ಯ ಚೀನಾಗಳಲ್ಲಿ ಸರ್ವಾಧಿಕಾರದ ವಿರುದ್ಧ ನಡೆದ ಕ್ರಾಂತಿಗಳು ಏಕ ಪಕ್ಷದ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಪರ್ಯಾವಸಾನ ಹೊಂದಿದವು. ಭಾರತ ಸ್ವಾತಂತ್ರ್ಯ ಗಳಿಸಿದ ಒಂದು ವರ್ಷ ಇಲ್ಲೂ ಕೂಡಾ ಒಂದೇ ಪಕ್ಷದ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ ಜವಾಹರಲಾಲ್ ನೆಹರೂ ಅವರು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವವಾದಿಗಳಲ್ಲಿ ಒಬ್ಬರು. ಅವರು ಟೀಕಿಸುವವರನ್ನು ಸ್ವಾಗತಿಸಿದರು.

ತನ್ನ ಬೋಡು ತಲೆಯ ಬಗ್ಗೆ ವ್ಯಂಗ್ಯ ಚಿತ್ರ ಬರೆದ ಶಂಕರನ್‌ರನ್ನು ಪಾರ್ಲಿಮೆಂಟಲ್ಲಿ ಹೊಗಳಿದರು. ವಿರೋಧ ಪಕ್ಷಗಳನ್ನು ಬೆಳೆಯಗೊಟ್ಟರು. ಸಮರ್ಥ ವಿರೋಧ ಪಕ್ಷವೊಂದು ಇಲ್ಲದಿದ್ದರೆ ಪ್ರಜಾಪ್ರಭುತ್ವದ ಬೇರುಗಳು ಅಲುಗಾಡುತ್ತವೆ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದೇ ಭಾರತದಲ್ಲಿ ಇಂದು ನಡೆಯುತ್ತಿರುವುದೇನು? ಆಡಳಿತ ಪಕ್ಷದ ವಿರುದ್ಧ ಯಾರೂ ಟೀಕೆ ಮಾಡುವಂತಿಲ್ಲ. ಮಾಡಿದರೆ ಅವರನ್ನು ಹುಡುಕಿಕೊಂಡು ಪೊಲೀಸರು ಬರುತ್ತಾರೆ ಅಥವಾ ಯಾವುದಾದರೂ ಸಂಘಟನೆ ಮನೆಯ ಮೇಲೆ ದಾಳಿ ಮಾಡುತ್ತದೆ. ಆಡಳಿತ ಪಕ್ಷದ ಉದ್ದೇಶ ಪ್ರತಿಪಕ್ಷರಹಿತ ಭಾರತವನ್ನು ರೂಪಿಸುವುದೇ ಆಗಿದೆ. ಅದಕ್ಕಾಗಿ ಚುನಾವಣಾ ಸಮಯದಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುವುದಿಲ್ಲ. ಕುಟುಂಬದ ವೈಯಕ್ತಿಕ ವಿಷಯಗಳು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತವೆ. ಕೊನೆಗೂ ಗೆಲ್ಲುವುದು ರಾಜಕೀಯ ಸಿದ್ಧಾಂತಗಳಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳೂ ಅಲ್ಲ. ಯಾವ ಅಭ್ಯರ್ಥಿ ಹೆಚ್ಚು ಹಣ ಚೆಲ್ಲಲು ಸಮರ್ಥನಿರುತ್ತಾನೋ ಆತ. ವಿಶ್ವದ ಮೇಲೆ ಸರ್ವಾಧಿಕಾರದ ಕಾರ್ಮೋಡ ಕವಿಯುತ್ತಿದೆ ಎನ್ನುವುದಕ್ಕೆ ಇನ್ನಷ್ಟು ಉದಾಹರಣೆ ಕೊಡಬಹುದು.

ತಾಲಿಬಾನಿಗಳು ಬಂದೂಕಿನ ಬಲದಿಂದ ಅಫ್ಘ್ಘಾನಿಸ್ತಾನವನ್ನು ಗೆದ್ದರು. ಇವರು ಎಂದಾದರೂ ಪ್ರಜೆಗಳಿಂದ ಚುನಾಯಿತ ಸರಕಾರವನ್ನು ರಚಿಸಿಯಾರೆ? ಪಾಕಿಸ್ತಾನದಲ್ಲಿ ಒಂದು ಚುನಾಯಿತ ಸರಕಾರವಿದೆ. ಆದರೆ ಅಲ್ಲಿ ಆಡಳಿತ ನಡೆಸುವುದು ಸೇನೆ. ರಶ್ಯದಲ್ಲಿ ಅಧ್ಯಕ್ಷ ಪುಟಿನ್ ಎಂದೆಂದೂ ಬದಲಾಗುವುದೇ ಇಲ್ಲ. ಕಮ್ಯುನಿಸ್ಟ್ ಚೀನಾದಲ್ಲಿ ಕ್ಸೀ ಆಮರಣಾಂತ ಅಧ್ಯಕ್ಷನಾಗಿದ್ದಾನೆ. ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಸರ್ವಾಧಿಕಾರ ವ್ಯವಸ್ಥೆ ಇದೆ. ಉತ್ತರ ಕೊರಿ ಯಾದ ಸರ್ವಾಧಿಕಾರಿ ಇಡೀ ವಿಶ್ವವನ್ನು ಸುಟ್ಟು ಬೂದಿ ಮಾಡಲು ತುದಿಗಾಲಲ್ಲಿ ಕಾದಿದ್ದಾನೆ. ನಿಜ ಹೇಳಬೇಕೆಂದರೆ ಪ್ರಜಾಪ್ರ ಭುತ್ವದಷ್ಟು ಒಳ್ಳೆಯ ರಾಜಕೀಯ ವ್ಯವಸ್ಥೆ ಬೇರೊಂದಿಲ್ಲ. ಈ ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯವಿದೆ. ಆಡಳಿತವು ಭ್ರಷ್ಟವಾದಾಗ ಅದನ್ನು ಕಿತ್ತೊಗೆಯಬಹುದು. ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ನಮ್ಮ ಜನ ಮಾಡುತ್ತಿರುವುದೇನು? ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಸೋತ ಪಕ್ಷದಿಂದ ಓಟಿಗೆ ನಿಂತವರನ್ನು ಗೆಲ್ಲಿಸಿದ್ದು. ಅಂತಹ ಪಕ್ಷಾಂತರಿಗಳನ್ನು ಸೋಲಿಸಿ ಪ್ರಜಾಪ್ರಭುತ್ವದ ತಾಕತ್ತೇನು ಎಂದು ಜಗತ್ತಿಗೆ ತೋರಿಸುವ ಅವಕಾಶ ಜನರಿಗಿತ್ತು. ಎಲ್ಲಾ ಪಕ್ಷದವರು ಗೆದ್ದ ಪಕ್ಷವನನ್ನೇ ಬೆಂಬಲಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇನು? ಇದು ಸರ್ವಾಧಿಕಾರವೇ ಅಲ್ಲವೇ?

ಸರ್ವಾಧಿಕಾರ ನಿಧಾನವಾಗಿ ಹೆಡೆ ಯೆತ್ತು ತ್ತಿರುವುದಕ್ಕೂ ಸ್ತ್ರೀಯರ ಸ್ಥಿತಿಗತಿ ಕುಸಿಯುವುದಕ್ಕೂ ನೇರವಾದ ಸಂಬಂಧವಿದೆ. ತಾಲಿಬಾನಿ ಸರಕಾರದಲ್ಲಿ ಒಬ್ಬಳೇ ಒಬ್ಬಳು ಹೆಣ್ಣಿಲ್ಲ. ನಮ್ಮ ದೇಶದಲ್ಲಿ ಸ್ತ್ರೀಯರಿಗೆ ರಾಜಕೀಯ ಮೀಸಲಾತಿ ಪಂಚಾಯತ್ ಮಟ್ಟದಲ್ಲಿದೆ. ವಿಧಾನ ಸಭೆ ಲೋಕಸಭೆಗಳಲ್ಲಿ ಇಲ್ಲ. ಪಂಚಾಯತನ್ನು ನಿಭಾಯಿಸಬಲ್ಲ ಹೆಣ್ಣು ಮೇಲ್‌ಸ್ತರದಲ್ಲಿ ಕಾರ್ಯ ನಿರ್ವಹಿಸಲಾರಳೇ? ಮಹಿಳೆಯೊಬ್ಬರು ಈ ದೇಶದ ಅತ್ಯುತ್ತಮ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದರು. ಅವಕಾಶ ಸಿಕ್ಕರೆ ಬೇರೆ ಮಹಿಳೆಯರು ಆ ಮಟ್ಟಕ್ಕೆ ಏರಬಹುದು. ರಾಜಕೀಯದಲ್ಲಿ ಇದೀಗ ತಾನೇ ಕಣ್ಣು ಬಿಡುತ್ತಿರುವ ಹೆಣ್ಣೊಬ್ಬಳು ತನ್ನ ಪಕ್ಷ ಮಹಿಳೆಯರಿಗೆ 40 ಶೇಕಡಾ ಮೀಸಲಾತಿ ನೀಡುವುದಾಗಿ ಹೇಳಿಬಿಟ್ಟಳು. ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೀವು ಗಮನಿಸಿದ್ದೀರಿ. ಲಿಂಗ ತಾರತಮ್ಯವು ಸರ್ವಾಧಿಕಾರದ ಒಂದು ರೂಪ. ಭಾರತ ಬಹು ಸಂಸ್ಕೃತಿಯ ದೇಶ. ಈ ದೇಶದಲ್ಲಿ ಪ್ರಜಾಪ್ರಭುತ್ವ ಯಶ ಸ್ವಿಯಾಗಬೇಕಿತ್ತು. ಆದರೆ ಆಗಲಿಲ್ಲ ಯಾಕೆ? ಇದಕ್ಕೆ ಉತ್ತರವನ್ನು ನಮ್ಮ ಜಾತಿ ವ್ಯವಸ್ಥೆಯಲ್ಲಿ ಕಂಡುಕೊಳ್ಳಬೇಕು. ಭಾರತದ ಚುನಾವಣೆ ಎಂದರೆ ಬಹುತೇಕವಾಗಿ ಪ್ರಬಲ ಜಾತಿಗಳ ನಡುವಿನ ಪೈಪೋಟಿ. ಪಕ್ಷ ಯಾವುದೇ ಇರಲಿ, ಪ್ರಬಲ ಜಾತಿ ಅಭ್ಯರ್ಥಿಗಳ ಶೀಲ ಹೇಗೆ ಇರಲಿ ಅವರು ಗೆಲ್ಲುತ್ತಾರೆ. ಗೆದ್ದ ಬಳಿಕ ಜಾತಿಯ ಪರವಾಗಿ ನಿಲ್ಲುತ್ತಾರೆ. ತಮ್ಮ ಜಾತಿಯ ಜಗದ್ಗುರುಗಳ ಪಾದಕ್ಕೆ ಕಪ್ಪು ಹಣವನ್ನು ಅರ್ಪಿಸಿ ರಾಜಕೀಯದಲ್ಲಿ ಧರ್ಮವನ್ನು ಬೆರೆಸುತ್ತಾರೆ. ಧರ್ಮ ಎಂದರೆ ಇಲ್ಲಿ ರೂಢ ಧರ್ಮವೆಂದು ಅರ್ಥ. ರೂಢ ಧರ್ಮದ ಪ್ರಧಾನ ಗುಣವೇ ಸರ್ವಾಧಿಕಾರ. ಹಾಗಾಗಿ ಪ್ರಬಲ ಜಾತಿಗಳು ಮೀಸಲಾತಿ ಬಯಸುತ್ತದೆ. ಮೀಸಲಾತಿ ಉಳ್ಳ ಪ್ರಬಲ ಜಾತಿಗಳು ಮೀಸಲಾತಿ ಪ್ರಮಾಣ ಹೆಚ್ಚಲು ಪ್ರತಿಭಟನೆ ಮಾಡುತ್ತವೆ. ಧರ್ಮ ಗುರುಗಳು ಜಾತಿ ಗುರುಗಳ ಮಟ್ಟಕ್ಕೆ ಇಳಿಯುತ್ತಾರೆ. ನಮ್ಮ ದೇಶದಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಬೆಳೆಯಲು ಜಾತಿಗಳೇ ಕಾರಣವಾಗಿದೆ.

ಪ್ರಪಂಚದ ಬಹುತೇಕ ರಾಷ್ಟ್ರಗಳು ಸರ್ವಾಧಿಕಾರಿ ರಾಷ್ಟ್ರಗಳಾಗಿವೆ. ಅಮೆರಿಕ, ಆಸ್ಟ್ರೇಲಿಯಾ ಬ್ರಿಟನ್‌ಗಳಂತಹ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಬಿಳಿಯರ ಸರ್ವಾಧಿಕಾರವಿದೆ. ಭಾರತದಲ್ಲಿ ಏಕ ಪಕ್ಷದ ಸರ್ವಾಧಿಕಾರದ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ. ಪ್ರಬಲವಾದ ರಾಷ್ಟ್ರಮಟ್ಟದ ಪಕ್ಷ ರಹಿತ ವ್ಯವಸ್ಥೆಯನ್ನು ರೂಪಿಸಬೇಕೆಂದು ಆಡಳಿತ ಪಕ್ಷ ಬಯಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ನಾವು ಬಹುತ್ವವನ್ನು ರಕ್ಷಿಸಬೇಕು. ಒಂದು ವಿರೋಧ ಪಕ್ಷವನ್ನು ಪ್ರಬಲವಾಗಿ ರಾಷ್ಟ್ರಮಟ್ಟದಲ್ಲಿ ರೂಪಿಸಬೇಕು. ಜಾತಿಗಳನ್ನು ಮತ್ತು ಸಾಂಸ್ಥಿಕ ಧರ್ಮಗಳನ್ನು ತಿರಸ್ಕರಿಸಬೇಕು. ಇದು ನಮ್ಮಿಂದ ಸಾಧ್ಯವೇ ಅನ್ನುವುದು ಪ್ರಶ್ನೆ.

Writer - ಡಾ.ಪ್ರಭಾಕರ ಶಿಶಿಲ

contributor

Editor - ಡಾ.ಪ್ರಭಾಕರ ಶಿಶಿಲ

contributor

Similar News