ನೆಟ್ ಜೀರೋ ಭವಿಷ್ಯಕ್ಕೆ ವರದಾನವಾದೀತೇ?

Update: 2021-11-06 19:30 GMT

ಕೈಗಾರೀಕರಣದ ಕೊಡುಗೆಯಾಗಿ ಜಾಗತಿಕ ತಾಪಮಾನ ನಮ್ಮ ಮುಂದಿದೆ. ಪ್ರಾರಂಭದಲ್ಲಿ ವಿಜ್ಞಾನಿಗಳು ಜಾಗತಿಕ ತಾಪಮಾನದ ತಾಪತ್ರಯಗಳನ್ನು ಹೇಳಿದಾಗ ನಮ್ಮನ್ನಾಳುವವರು ತಲೆಕೆಡಿಸಿಕೊಳ್ಳಲೇ ಇಲ್ಲ. ದಿನೇ ದಿನೇ ಅದರ ತಾಪತ್ರಯಗಳು ಕಣ್ಣ ಮುಂದೆ ಬಂದಾಗ, ಭವಿಷ್ಯ ಕರಾಳವಾಗುತ್ತಿದೆ ಎಂಬ ಅರಿವಾದೊಡನೆ ವಿಶ್ವಸಂಸ್ಥೆಯ ಅಡಿಯಲ್ಲಿ ಬಹುತೇಕ ದೇಶಗಳ ದಿಗ್ಗಜರು ಸಭೆ ಸೇರಿ ತಾಪಮಾನವನ್ನು ಕಡಿಮೆ ಮಾಡುವ ಬಗ್ಗೆ ಪುಂಖಾನುಪುಂಖವಾಗಿ ಹರಟೆ ಹೊಡೆದರು. ಅವರೆಲ್ಲರ ಹರಟೆಗಳು ಜಗಲಿ ಕಟ್ಟೆಗೆ ಮಾತ್ರ ಸೀಮಿತ ಎಂಬ ಅರಿವು ಮೂಡಲು ಬಹಳ ದಿನಗಳು ಬೇಕಾಗಲಿಲ್ಲ. ಏಕೆಂದರೆ ಹೇಳಿದಂತೆ ಅವರಾರೂ ನಡೆದುಕೊಳ್ಳಲಿಲ್ಲ. ಅವರ ಭಾಷಣಗಳು ಕೇವಲ ವೇದಿಕೆ ಮತ್ತು ಕಡತಗಳಿಗೆ ಮಾತ್ರ ಸೀಮಿತವಾಗಿದ್ದವು. ಜಾಗತಿಕ ತಾಪಮಾನವನ್ನು ಕಡಿಮೆ ಮಾಡುತ್ತೇವೆ ಎಂದು ಜಂಭ ಕೊಚ್ಚಿಕೊಂಡ ಉತ್ತರ ಕುಮಾರರ ಮಾತುಗಳು ಅಡುಗೆ ಮನೆಯ ವಾತಾವರಣವನ್ನೂ ಬದಲಿಸಲಾಗಲಿಲ್ಲ ಎಂಬುದು ಸತ್ಯ.

ವಾಸ್ತವವಾಗಿ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗತೊಡಗಿತೇ ವಿನಹ ಕಡಿಮೆಯಾಗುವ ಯಾವ ಮುನ್ಸೂಚನೆಗಳೂ ಕಾಣಲೇ ಇಲ್ಲ. ದಿನೇ ದಿನೇ ಭವಿಷ್ಯವಂತೂ ಕರಾಳವಾಗುತ್ತಲೇ ಇದೆ. ಜಾಗತಿಕ ತಾಪಮಾನ ಏರಿಕೆಯಿಂದ ಭೂತಾಪಮಾನ ಹೆಚ್ಚಳವಾಗುತ್ತಿದೆ. ನದಿ ಹಾಗೂ ಸರೋವರಗಳ ಮೇಲಿನ ಮಂಜುಗಡ್ಡೆ ಕರಗುತ್ತಿವೆ. ಸಸ್ಯ ಹಾಗೂ ಪ್ರಾಣಿಗಳು ತಮ್ಮ ಆವಾಸವನ್ನು ಬದಲಿಸಿಕೊಳ್ಳುತ್ತಿವೆ. ಹಿಮನದಿಗಳು ಕರಗಿ ಸಮುದ್ರ ಸೇರುತ್ತಿವೆ. ಸಮುದ್ರ ಮಟ್ಟ ಹೆಚ್ಚುತ್ತಿದ್ದು, ನಿಧಾನವಾಗಿ ನೆಲವನ್ನು ಕಬಳಿಸುತ್ತಿದೆ. ತಾಪಮಾನ ಏರಿಕೆಯಿಂದ ಮಳೆ ಹಾಗೂ ಹವಾಮಾನದಲ್ಲಿ ವೈಪರೀತ್ಯಗಳಾಗುತ್ತಿವೆ. ಪ್ರಾರಂಭದಲ್ಲಿ ವಿಜ್ಞಾನಿಗಳು ಊಹಿಸಿದ ಹೇಳಿಕೆಗಳು ಈಗ ನಿಜವಾಗಿವೆ. ಮಂಜುಗಡ್ಡೆಯ ನಷ್ಟ, ವೇಗವರ್ಧಿತ ಸಮುದ್ರದ ಮಟ್ಟ ಏರಿಕೆ ಮತ್ತು ದೀರ್ಘ ಹಾಗೂ ತೀವ್ರವಾದ ಶಾಖ ಇವೆಲ್ಲವೂ ಮಾನವರೂ ಸೇರಿದಂತೆ ಸಸ್ಯ ಹಾಗೂ ಪ್ರಾಣಿಗಳ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಹವಾಮಾನ ಬದಲಾವಣೆಯ ತೀವ್ರತೆಯನ್ನು ತಗ್ಗಿಸಲು 2015ರಲ್ಲಿ ಸುಮಾರು 200 ರಾಷ್ಟ್ರಗಳು ಒಗ್ಗೂಡಿ ಪ್ಯಾರೀಸ್‌ನ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.

ಜಾಗತಿಕ ತಾಪಮಾನದ ಹೆಚ್ಚಳವನ್ನು 1.50 ಸೆಲ್ಸಿಯಸ್ ಕಡಿಮೆ ಮಾಡುವ ಗುರಿ ಹಾಕಿಕೊಂಡವು. ಆದಾಗ್ಯೂ ನಿಗದಿತ ಗುರಿ ತಲುಪಲು ಆಗಲೇ ಇಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ಭೂ ತಾಪಮಾನವು 30 ಸೆಲ್ಸಿಯಸ್ ಹೆಚ್ಚಳವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗ ಪುನಃ ಇಂತಹ ಇನ್ನೊಂದು ಒಪ್ಪಂದಕ್ಕೆ ಬಹುತೇಕ ರಾಷ್ಟ್ರಗಳು ಪ್ರಸ್ತಾವನೆಯನ್ನು ಮುಂದಿರಿಸಿವೆ. ಅದರ ಪ್ರಕಾರ 2050ರ ವೇಳೆಗೆ ಹಸಿರುಮನೆ ಅನಿಲಗಳ ಪ್ರಮಾಣವನ್ನು ಕೈಗಾರಿಕಾ ಪೂರ್ವದ ಹಂತಕ್ಕೆ ತರುವುದು. ಗ್ಲಾಸ್ಗೋದಲ್ಲಿ ನಡೆಯುತ್ತಿರುವ ‘ಹವಾಮಾನ ವೈಪರೀತ್ಯ ತಡೆ ಸಮಾವೇಶ’ದಲ್ಲಿ ‘ನೆಟ್ ಜೀರೋ’ ಹೆಸರಿನಲ್ಲಿ ಕೆಲ ರಾಷ್ಟ್ರಗಳು ತಮ್ಮ ಪ್ರಸ್ತಾವನೆಯನ್ನು ಮುಂದಿರಿಸಿವೆ. ನೆಟ್ ಜೀರೋ ಎಂಬುದು ಇಂಗಾಲದ ಶೂನ್ಯತೆಗೆ ಬಳಸುವ ಪದವಾಗಿದೆ. ಅಂದರೆ ಇಂಗಾಲದ ಹೊರಸೂಸುವಿಕೆಯನ್ನು ನಿಲ್ಲಿಸುವ ಹಾಗೂ ವಾತಾವರಣದಲ್ಲಿನ ಹೆಚ್ಚಿನ ಇಂಗಾಲವನ್ನು ಕಡಿಮೆ ಮಾಡುವ ಯೋಜನೆ ಇದಾಗಿದೆ. ಕೈಗಾರಿಕೀಕರಣಕ್ಕಿಂತ ಮೊದಲು ವಾತಾವರಣದಲ್ಲಿದ್ದ ಹಸಿರುಮನೆ ಅನಿಲಗಳ ಪ್ರಮಾಣವನ್ನು ಅಷ್ಟಕ್ಕೆ ನಿಲ್ಲಿಸುವ ಪರಿಕಲ್ಪನೆೆ. ನೆಟ್ ಜೀರೋದ ಅರ್ಥ ಮಾನವ ಉತ್ಪಾದಿತ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸುವುದು ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಿರುವ ಇಂಗಾಲದ ಹೊರಸೂಸುವಿಕೆಯನ್ನು ನಿರ್ಮೂಲನೆ ಮಾಡುವುದಾಗಿದೆ. ನೆಟ್ ಜೀರೋದಲ್ಲಿ ಎರಡು ಪ್ರಕ್ರಿಯೆಗಳಿವೆ.

ಒಂದು ವಾತಾವರಣಕ್ಕೆ ಇಂಗಾಲದ ಬಿಡುಗಡೆಯಾಗದಂತೆ ನೋಡಿಕೊಳ್ಳುವುದು. ಇನ್ನೊಂದು ಈಗಾಗಲೇ ವಾತಾವರಣಕ್ಕೆ ಸೇರಿದ ಇಂಗಾಲವನ್ನು ನಿರ್ಮೂಲನೆ ಮಾಡುವುದು. ಸದ್ಯದ ಪರಿಸ್ಥಿತಿಯಲ್ಲಿ ಈ ಎರಡೂ ಪ್ರಕ್ರಿಯೆಗಳಲ್ಲಿ ಸಾಕಷ್ಟು ಸವಾಲುಗಳಿವೆ. ಮೊದಲನೇ ಪ್ರಕ್ರಿಯೆಯಲ್ಲಿ ಇಂಗಾಲದ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಇಂಗಾಲವನ್ನು ಉತ್ಪತ್ತಿ ಮಾಡುವ ಇಂಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ವಾಸ್ತವದಲ್ಲಿ ಇದು ಬಹುದೊಡ್ಡ ಪ್ರಯಾಸದ ಕೆಲಸ. ಪಳಯುಳಿಕೆ ಇಂಧನಗಳನ್ನು ಬಿಟ್ಟು ಪರ್ಯಾಯ ಇಂಧನಗಳನ್ನು ಬಳಸಲು ಬೇಕಾದ ತಂತ್ರಗಾರಿಕೆ ಇನ್ನೂ ಅಷ್ಟೊಂದು ವೇಗವಾಗಿ ಬೆಳವಣಿಗೆಯಾಗಿಲ್ಲ. ಬದಲಿ ಶಕ್ತಿಯ ಮೂಲಗಳಾದ ಪವನ ವಿದ್ಯುತ್, ಬ್ಯಾಟರಿ ಚಾಲಿತ ವಿದ್ಯುತ್, ಸೌರಶಕ್ತಿ ವಿದ್ಯುತ್, ಅಲೆಗಳ ವಿದ್ಯುತ್, ಜೈವಿಕ ಇಂಧನ ಮುಂತಾದ ನವೀಕರಿಸಬಹುದಾದ ಇಂಧನಗಳು ಅಗತ್ಯದಷ್ಟು ಬೇಡಿಕೆಯನ್ನು ಪೂರೈಸುತ್ತಿಲ್ಲ. ಅಲ್ಲದೆ ಕೆಲ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನೇ ನಿಲ್ಲಿಸುತ್ತಿದ್ದೇವೆ. ಉದಾಹರಣೆಗೆ ನಾವೆಲ್ಲ ಚಿಕ್ಕವರಿದ್ದಾಗ ಪ್ರತಿ ಹಳ್ಳಿಯಲ್ಲೂ ಕೆಲ ಮನೆಗಳಲ್ಲಿ ಅಡುಗೆಗಾಗಿ ಗೋಬರ್ ಗ್ಯಾಸ್ ಬಳಸುತ್ತಿದ್ದರು. ಈಗ ಅದರ ಬಳಕೆ ಬಹುತೇಕ ನಿಂತುಹೋಗಿದೆ. ಇಂತಹ ಅದೆಷ್ಟೋ ನವೀಕರಿಸಬಹುದಾದ ಇಂಧನ ಬಳಕೆ ಈಗ ನಿಂತುಹೋಗಿದೆ. ಪರಿಸ್ಥಿತಿ ಹೀಗಿರುವಾಗ ಪಳಯುಳಿಕೆ ಇಂಧನದ ಬಳಕೆಯನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವೇ? ಎಂಬ ಪ್ರಶ್ನೆ ಎದುರಾಗದಿರದು.

ಎರಡನೇ ಪ್ರಕ್ರಿಯೆಯಲ್ಲಿ ವಾತಾವರಣದಿಂದ ಇಂಗಾಲವನ್ನು ನಿರ್ಮೂಲನೆ ಮಾಡುವುದು. ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಗಿಡಮರಗಳನ್ನು ಬೆಳಸಬೇಕಾಗುತ್ತದೆ. ವಾತಾವರಣವನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಜಾಗತಿಕ ತಾಪವನ್ನು ಕಡಿಮೆ ಮಾಡಲು ಗಿಡಮರ ಬೆಳೆಸುವುದು ಒಂದು ಜನಪ್ರಿಯ ಯೋಜನೆಯಾಗಿದೆ. ಆದರೆ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. 2020ರಲ್ಲಿ ಪ್ರಪಂಚವು 2,58,000 ಚ.ಕಿ.ಮೀ. ಅರಣ್ಯವನ್ನು ಕಳೆದುಕೊಂಡಿದೆೆ. ಒಂದು ಅಂದಾಜಿನಂತೆ ಪ್ರತಿ ನಿಮಿಷಕ್ಕೆ 27 ಫುಟ್‌ಬಾಲ್ ಮೈದಾನದಷ್ಟು ಅರಣ್ಯ ಕಳೆದುಹೋಗುತ್ತಿದೆ. ಅರಣ್ಯನಾಶ ತಡೆಯಲು ಕೋಟಿಗಟ್ಟಲೆ ಹಣವನ್ನು ವ್ಯಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಸಂರಕ್ಷಿಸುವ ಹೇಳಿಕೆಗಳು ಕೇವಲ ಬಾಯಿ ಮಾತಿನಲ್ಲೇ ಉಳಿದಿವೆ. ಪ್ರತಿವರ್ಷ ಲಕ್ಷಾಂತರ ಎಕರೆಗಳಲ್ಲಿ ಗಿಡ ನೆಟ್ಟು ಫೋಟೊ ತೆಗೆಸಿದ್ದೇ ಆಯಿತು. ಆದರೆ ನೆಟ್ಟ ಸಸಿಗಳೆಲ್ಲ ಏನಾದವು? ಎಂದು ನೋಡುವವರು ಯಾರೂ ಇಲ್ಲ. ಅವುಗಳ ಆರೈಕೆ ಮತ್ತು ಸಂರಕ್ಷಣೆ ಇಲ್ಲದೆ ಮತ್ತದೇ ಜಾಗದಲ್ಲಿ ಮುಂದಿನ ವರ್ಷ ಮತ್ತೊಂದು ಸಸಿ ನೆಡುವ ಕಾರ್ಯಕ್ರಮ ರೂಪಿತವಾಗುತ್ತದೆ. ವಿಶ್ವದ ಹಿರಿಯ ನಾಯಕರೆಲ್ಲ ಈಗ ಗ್ಲಾಸ್ಗೋದಲ್ಲಿ ಮತ್ತದೇ ಘೋಷಣೆಯೊಂದಿಗೆ ತಮ್ಮ ಕಾರ್ಯ ಯೋಜನೆ ರೂಪಿಸಿದ್ದಾರೆ. ಅರಣ್ಯೀಕರಣಕ್ಕೆ ಪಣತೊಡುವ ಮೂಲಕ ಅರಣ್ಯ ನಾಶವನ್ನು ಕೊನೆಗೊಳಿಸೋಣ ಎಂಬ ಹೇಳಿಕೆಗಳು ಎಲ್ಲೆಡೆ ವ್ಯಾಪಿಸುತ್ತಿವೆ. ಇಂಗಾಲದ ಹೊರಸೂಸುವಿಕೆ ತಡೆಯಿಂದ ಜಾಗತಿಕವಾಗಿ ಬಲಿಷ್ಠವಾದ ಕಂಪೆನಿಗಳಿಗೆ ಬಹುದೊಡ್ಡ ಆರ್ಥಿಕ ಪೆಟ್ಟು ಬೀಳಲಿದೆ. ಏಕೆಂದರೆ ಇಡೀ ಜಗತ್ತಿನ ತಾಪಮಾನ ಏರಿಕೆಯಲ್ಲಿ ಇವುಗಳದ್ದೇ ಬಹುಪಾಲು. ಇವು ಬಳಸುತ್ತಿರುವ ಪಳಯುಳಿಕೆ ಇಂಧನವೇ ಇಂದಿನ ಜಾಗತಿಕ ತಾಪಮಾನ ಏರಿಕೆಗೆ ಮೂಲ ಕಾರಣ.

ಜಗತ್ತಿನ ಶೇ. 40ರಷ್ಟು ಇಂಧನವನ್ನು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯಮಕ್ಕೆ ಬಳಸಿಕೊಳ್ಳುತ್ತಿವೆ. ಪಳಯುಳಿಕೆ ಇಂಧನ ಮುಕ್ತ ಕೈಗಾರಿಕೆ ನಡೆಸಲು ಈ ಕಂಪೆನಿಗಳು ಸಿದ್ಧತೆ ಮಾಡಿಕೊಂಡಿಲ್ಲ. ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳು ಇಂಗಾಲದ ಹೊರಸೂಸುವಿಕೆ ತಡೆಯಲು ಶ್ರೀಮಂತ ರಾಷ್ಟ್ರಗಳು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಬೇಕೆಂದು ಪ್ರತಿ ಸಿಒಪಿಯಲ್ಲಿ ಪ್ರತಿಪಾದಿಸಲಾಗಿದೆ. 2009ರ ಸಿಒಪಿಯಲ್ಲಿ ಶ್ರೀಮಂತ ರಾಷ್ಟ್ರಗಳು ಇದಕ್ಕಾಗಿ 7.5 ಲಕ್ಷ ಕೋಟಿ ನೀಡುವುದಾಗಿ ಘೋಷಿಸಿದವು. ಆದರೆ ಇದುವರೆಗೂ ಅಂತಹ ಯಾವುದೇ ಸಹಾಯವನ್ನು ಅಭಿವೃದ್ಧಿ ರಾಷ್ಟ್ರಗಳು ನೀಡಿಲ್ಲ. ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸದ ಅಭಿವೃದ್ಧ್ದಿ ರಾಷ್ಟ್ರಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ನೆಟ್ ಜೀರೋ ಪರಿಕಲ್ಪನೆಯನ್ನು ಹೇರುತ್ತಿವೆ. ಕೆಲ ಅಭಿವೃದ್ಧಿ ರಾಷ್ಟ್ರಗಳು 2050ರ ವೇಳೆಗೆ ಇಂಗಾಲ ತಟಸ್ಥಗೊಳಿಸುವುದಾಗಿ ಘೋಷಣೆ ಮಾಡಿಕೊಂಡಿವೆ. ಈ ಸಮಾವೇಶದಲ್ಲಿ ಭಾಗವಹಿಸಿದ ಭಾರತವು ತನ್ನ ನಡೆಯನ್ನು ಸ್ಪಷ್ಟಪಡಿಸಿದೆ. 2070ರ ವೇಳೆಗೆ ಇಂಗಾಲವನ್ನು ತಟಸ್ಥಗೊಳಿಸುವ ಬದ್ಧತೆ ವ್ಯಕ್ತಪಡಿಸಿದೆ. ಈ ಗುರಿ ತಲುಪಲು ಶ್ರೀಮಂತ ರಾಷ್ಟ್ರಗಳ ನೆರವು ಅತ್ಯಂತ ಅಗತ್ಯವಾಗಿದೆ. ಪ್ರತಿ ರಾಷ್ಟ್ರವೂ ಅಗತ್ಯ ಕ್ರಮಗಳನ್ನು ಅನುಸರಿಸಬೇಕಾಗಿದೆ.

ಅವುಗಳಲ್ಲಿ ಅರಣ್ಯ ಬೆಳೆಸುವುದು, ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು, ಬ್ಯಾಟರಿ ಚಾಲಿತ ವಾಹನಗಳ ಬಳಕೆ, ಸೌರಶಕ್ತಿ ಬಳಕೆಯ ಉತ್ತೇಜನ, ಪವನ ವಿದ್ಯುತ್ ಬಳಕೆ ಸೇರಿದಂತೆ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಉತ್ತೇಜಿಸುವತ್ತ ಚಿತ್ತ ಹರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮುಂದೆ ಭಾರೀ ಸವಾಲುಗಳಿವೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು 2060ರ ವೇಳೆಗೆ ಶೇ.99ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2050ರ ವೇಳೆಗೆ 1,689 ಗಿಗಾವ್ಯಾಟ್ ಮತ್ತು 2070ರ ವೇಳೆಗೆ 5,630 ಗಿಗಾವ್ಯಾಟ್ ಹೆಚ್ಚಿಸಬೇಕಿದೆ. ಅದರಂತೆ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2050ರ ವೇಳೆಗೆ 68 ಗಿ.ವ್ಯಾ. ಮತ್ತು 2070ರ ವೇಳೆಗೆ 225 ಗಿ.ವ್ಯಾ. ಹೆಚ್ಚಿಸಬೇಕಾಗಿದೆ. ಸಾರಿಗೆ ಕ್ಷೇತ್ರದಲ್ಲಿ ಇಂಧನ ಬಳಕೆಯನ್ನು ಸಂಪೂರ್ಣವಾಗಿ ತಗ್ಗಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ 2070ರ ವೇಳೆಗೆ ಇಲೆಕ್ಟ್ರಿಕ್ ಕಾರುಗಳ ಪಾಲು ಶೇ.84ನ್ನು ತಲುಪಬೇಕಿದೆ. ಸರಕು ಸಾಗಣೆ ಟ್ರಕ್‌ಗಳಲ್ಲಿ 2070ರ ವೇಳೆಗೆ ಇಲೆಕ್ಟ್ರಿಕ್ ಟ್ರಕ್‌ಗಳ ಪಾಲು ಶೇ.79ನ್ನು ತಲುಪಬೇಕಿದೆ. ಉಳಿದ ಪಾಲು ಹೈಡ್ರೋಜನ್‌ನಿಂದ ನಡೆಸುವಂತಹ ಟ್ರಕ್‌ಗಳಿರಬೇಕಿದೆ. 2070ರ ವೇಳೆಗೆ ಕಾರು ಟ್ರಕ್ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಜೈವಿಕ ಇಂಧನ ಮಿಶ್ರಣದ ಪಾಲು ಶೇ.84ನ್ನು ಮುಟ್ಟಬೇಕಿದೆ.

 ಕೈಗಾರಿಕಾ ವಲಯದಲ್ಲಿ ಕಲ್ಲಿದ್ದಲು ಬಳಕೆ 2065ರ ವೇಳೆಗೆ ಶೇ.97ರಷ್ಟು ಕಡಿಮೆಯಾಗಬೇಕಿದೆ. ಕೈಗಾರಿಕೆಗಳಲ್ಲಿ ಶಕ್ತಿಯ ಬಳಕೆಯಲ್ಲಿ ಹೈಡ್ರೋಜನ್ ಪಾಲು ಈಗಿನದಕ್ಕಿಂತ ಹೆಚ್ಚಾಗಬೇಕಿದೆ. 2050ರ ವೇಳೆಗೆ ಶೇ.15ರಷ್ಟು ಮತ್ತು 2070ರ ವೇಳೆಗೆ ಶೇ.19ರಷ್ಟು ಹೈಡ್ರೋಜನ್ ಬಳಕೆ ಹೆಚ್ಚಾಗಬೇಕಿದೆ. ಜೊತೆಗೆ ಕಚ್ಚಾತೈಲದ ಬಳಕೆ 2070ರ ವೇಳೆಗೆ ಶೇ.90ರಷ್ಟು ಕಡಿಮೆಯಾಗಬೇಕಿದೆ. ಈ ಎಲ್ಲಾ ಗುರಿಗಳನ್ನು ತಲುಪಲು ಬೇಕಾದ ಆರ್ಥಿಕ ಸಂಪನ್ಮೂಲಕ್ಕಾಗಿ ಏನು ಮಾಡಬೇಕು ಎಂಬುದು ನಮ್ಮ ಮುಂದಿರುವ ಭಾರೀ ಸವಾಲಾಗಿದೆ. ಪುನಃ ಇದಕ್ಕಾಗಿ ಬಹುರಾಷ್ಟ್ರೀಯ ಕಂಪೆನಿಗಳ ಮೊರೆ ಹೋಗುವುದೇ, ಶ್ರೀಮಂತ ರಾಷ್ಟ್ರಗಳ ಮುಂದೆ ಕೈಯೊಡ್ಡಬೇಕೇ ಅಥವಾ ಸರಕಾರಿ ವೆಚ್ಚದಲ್ಲಿಯೇ ಪೂರೈಸಲು ಸಾಧ್ಯವೇ ಎಂಬ ಬಗ್ಗೆ ಪರಾಮರ್ಶಿಸಬೇಕಾಗಿದೆ. ತಾತ್ವಿಕ ಅಂಶಗಳೇನೇ ಇರಲಿ ಪ್ರಾಯೋಗಿಕವಾಗಿ ಇಂಗಾಲವನ್ನು ತಟಸ್ಥಗೊಳಿಸಲು ಸಾಧ್ಯವೇ ಎಂಬುದೂ ಚರ್ಚಿತ ವಿಷಯವಾಗಿದೆ. ಅದೇನೇ ಇರಲಿ ಇಂಗಾಲ ತಟಸ್ಥಗೊಳ್ಳುವುದನ್ನು ನಾವು ನೋಡಲಾಗದಿದ್ದರೂ ನಮ್ಮ ಮುಂದಿನ ಪೀಳಿಗೆಯಾದರೂ ಅದರ ಸಾಧಕಗಳನ್ನು ಉಪಯೋಗಿಸಿಕೊಳ್ಳುವಂತಾಗಲಿ ಎಂಬ ಆಶಯ ನಮ್ಮದು.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News