ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತದಿದ್ದರೆ ದುಷ್ಟ ಅಜೆಂಡಾಗಳಿಗೆ ಪರೋಕ್ಷ ಬೆಂಬಲ: ಎಂ.ಕೆ.ಫೈಝಿ

Update: 2021-11-06 18:16 GMT

ಬೆಂಗಳೂರು, ನ. 6: `ಮೋದಿ-ಶಾ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಪ್ರಮುಖ ಪ್ರತಿಪಕ್ಷಗಳು ಧ್ವನಿ ಎತ್ತದೆ ಮೌನವಾಗಿದ್ದು, ಸರಕಾರದ ದುಷ್ಟ ಅಜೆಂಡಾಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎಸ್‌ಡಿಪಿಐ ಮಾತ್ರ ಸಂಘಪರಿವಾರ ನೇತೃತ್ವದ ಸರಕಾರದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ನಡೆಸುತ್ತಿದೆ' ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ತಿಳಿಸಿದ್ದಾರೆ.

ಶನಿವಾರ ಎಸ್‌ಡಿಪಿಐ ಪಕ್ಷದ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, `ಗರಿಷ್ಠ ಮೊತ್ತದ ನೋಟು ಅಮಾನ್ಯೀಕರಣ, ಜಿಎಸ್ಟಿಯಿಂದ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದ್ದು, ಬಿಜೆಪಿ ಸರಕಾರ ದೇಶದ ಆಸ್ತಿಗಳ ಮಾರಾಟದಲ್ಲಿ ತೊಡಗಿದೆ. ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಮಿಲಿಯನ್ ಗಟ್ಟಲೆ ಸಾಲ ಮಾಡಿ ಮಲ್ಯ ಮತ್ತಿತರ ಮೋದಿಯ ಆಪ್ತರು ಪರಾರಿಯಾಗಿದ್ದಾರೆ. ಬ್ರಾಹ್ಮಣ್ಯ ರಾಷ್ಟ್ರ ನಿರ್ಮಿಸುವ ಯತ್ನ ತೀವ್ರಗತಿಯಲ್ಲಿ ನಡೆಯುತ್ತಿದೆ.ನಂತರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೆ ವಿಧಿಯನ್ನು ರದ್ದು ಮಾಡಲಾಯಿತು. ರಾಜ್ಯದ ಸ್ಥಾನಮಾನ ನೀಡುವುದಾಗಿ ಹೇಳಿ ಇದುವರೆಗೆ ನೀಡಿಲ್ಲ ಕಾಶ್ಮೀರವನ್ನು ಎರಡು ವಿಭಜನೆ ಮಾಡಿ ಕೇಂದ್ರದ ಅಧೀನದಲ್ಲಿ ತರಲಾಯಿತು. ಕಾಶ್ಮೀರವನ್ನು ನರಕಸದೃಶವಾಗಿ ಮಾಡಲಾಯಿತು. ಇಷ್ಟೆಲ್ಲಾ ನಡೆಯುತ್ತಿದ್ದರೂ ದೇಶದ ಇತರ ಪಕ್ಷಗಳು ಧ್ವನಿ ಎತ್ತದೆ ದಿವ್ಯ ಮೌನಕ್ಕೆ ಶರಣಾಗಿವೆ' ಎಂದು ಅವರು ಆರೋಪಿಸಿದರು.

`ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ 11 ತಿಂಗಳುಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅವಕಾಶವಂಚಿತ ಜನ ಸಮುದಾಯಗಳು ವಿಶೇಷವಾಗಿ ಮುಸ್ಲಿಮರು, ಸಂಕಷ್ಟದಲ್ಲಿದ್ದಾರೆ. ಎನ್‌ಆರ್‌ಸಿ ಜಾರಿಗೆ ತಂದು ದೇಶದ ಮುಸ್ಲಿಮರ ಪೌರತ್ವ ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಗೂಂಡಾಗಳು ಅಶಾಂತಿ ಸೃಷ್ಟಿಸುತ್ತಿದ್ದಾರೆ. ತ್ರಿಪುರದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದೆ. ಅಲ್ಲಿಗೆ ಭೇಟಿ ನೀಡಿದ್ದ ಸತ್ಯಶೋಧನಾ ತಂಡದ ಸ್ವತಂತ್ರ ವ್ಯಕ್ತಿಗಳ ವಿರುದ್ಧ ಕರಾಳ ಕಾನೂನು ಯುಎಪಿಎ ಹಾಕಲಾಗಿದೆ' ಎಂದು ಅವರು ದೂರಿದರು.

`ಕ್ರೈಸ್ತರ ವಿರುದ್ಧವೂ ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ದೌರ್ಜನ್ಯ ನಡೆಯುತ್ತಿದೆ. ಮತಾಂತರದ ಹೆಸರಿನಲ್ಲಿ ಚರ್ಚ್ಗಳ ಮೇಲೆ ದಾಳಿ ನಡೆಸಲಾಗಿದೆ. ದಲಿತರ ಮೇಲೆ ಅತ್ಯಾಚಾರ, ಕೊಲೆ ನಿರಂತರವಾಗಿ ನಡೆಯುತ್ತಿದೆ. ಖಾಸಗೀಕರಣದ ಮೂಲಕ ಮೀಸಲಾತಿ ರದ್ದುಗೊಳಿಸಲಾಗುತ್ತಿದೆ. ಇವೆಲ್ಲವೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದ ಅವರು, ನೂತನ ಶಿಕ್ಷಣ ವ್ಯವಸ್ಥೆಯ ಮೂಲಕ ಜಾತಿವಾದಿ ಚಾತುರ್ವರ್ಣ ನೀತಿ ತರಲು ಯತ್ನಿಸಲಾಗುತ್ತಿದೆ. ಜಾತಿ ಆಧಾರಿತ ಕುಲ ಕಸುಬುಗಳಿಗೆ ಸೀಮಿತಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ದೂರಿದರು.

`ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ದೇಶದ ಎಲ್ಲ ಜನ ಸಮುದಾಯಗಳು ತೊಂದರೆಯಲ್ಲಿವೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯಿಂದ ಕೇವಲ ದಲಿತ, ಮುಸ್ಲಿಮರಿಗೆ ಮಾತ್ರವಲ್ಲ, ಇಡೀ ದೇಶದ ಜನರಿಗೆ ತೊಂದರೆಯಾಗಿದೆ. ಅದಾನಿ, ಅಂಬಾನಿ ಸಹಿತ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರ ಮೋದಿ ಸರಕಾರದ ನೀತಿಗಳಿಂದ ಲಾಭವಾಗಿದೆ. ದೇಶದ ಭೂಮಿ, ಆಕಾಶ, ರೈಲು, ವಿಮಾನ ನಿಲ್ದಾಣ, ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ. ಮೋದಿ-ಬಿಜೆಪಿ ದೇಶವನ್ನು ಮತ್ತೆ ಬ್ರಿಟಿಷರಿಗೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ದೇಶದ 14 ರಾಜ್ಯಗಳಲ್ಲಿ ಎಸ್‌ಡಿಪಿಐ ಬೀದಿ ಹೋರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕೇವಲ ಸಂಘಪರಿವಾರ ಮತ್ತು ಎಸ್‌ಡಿಪಿಐ ನಡುವೆ ಮಾತ್ರ ಸೈದ್ಧಾಂತಿಕ ಹೋರಾಟ ನಡೆಯಲಿದೆ. ಎಸ್‌ಡಿಪಿಐ ಧ್ವನಿ ಇಲ್ಲದ ಜನ ಸಮುದಾಯಗಳ ಧ್ವನಿಯಾಗಿದೆ. ಪಕ್ಷದ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪರಿವಾರಕ್ಕೆ ಎಸ್‌ಡಿಪಿಐ ಶಕ್ತಿಯ ಬಗ್ಗೆ ಅರಿವಾಗಿದೆ. ಮೋದಿ, ಶಾ, ಯೋಗಿ ಹೆಸರಲ್ಲಿ ಕೆಲವರು ನಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಎಸ್‌ಡಿಪಿಐಗೆ ಯಾವ ಭಯವೂ ಇಲ್ಲ. ಎಲ್ಲ ರೀತಿಯ ಅನ್ಯಾಯಗಳ ವಿರುದ್ಧ ಪಕ್ಷ ಧ್ವನಿ ಎತ್ತುತ್ತಿದೆ. ಯೋಗಿ, ಮೋದಿ, ಶಾ ಆಗಾಗ ಎಸ್‌ಡಿಪಿಐ ಹೆಸರೆತ್ತುತ್ತಿದ್ದಾರೆ. ಅವರಿಗೂ ಪಕ್ಷದ ಶಕ್ತಿ ಸಾಮರ್ಥ್ಯದ ಬಗ್ಗೆ ಅರಿವಾಗಿದೆ. ನಮ್ಮ ಹಲವು ನಿರಪರಾಧಿಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸು ಹಾಕಿ ಬಂಧಿಸಲಾಗಿದೆ. ನಾವು ಒಂಟಿಯಲ್ಲ, ನಮ್ಮೊಂದಿಗೆ ದೊಡ್ಡ ಸಮೂಹವಿದೆ. ಜನರ ಬೆಂಬಲವಿದೆ. ಇಂದಿನ ಈ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಆಂತರಿಕ ಚುನಾವಣೆ ಮೂಲಕ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಚುನಾವಣೆ ಉಸ್ತುವಾರಿಗಳಾಗಿ ರಾಷ್ಟ್ರೀಯ ಉಪಾಧ್ಯಕ್ಷ ದಹ್ಲಾನ್ ಬಾಖವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿ, ರಾಜಸ್ತಾನ್ ರಾಷ್ಟ್ರೀಯ ಸಮಿತಿ ಸದಸ್ಯ ಮಜೀದ್ ಫೈಝಿ, ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಟ್ರೀಯ ನಾಯಕರಾದ ಇಲ್ಯಾಸ್ ಮುಹಮ್ಮದ್ ತುಂಬೆ, ಅಬ್ದುಲ್ ಮಜೀದ್ ಮೈಸೂರು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News