ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ವಂಚನೆಗೆ ಯತ್ನ; ಮೂವರ ಬಂಧನ

Update: 2021-11-07 16:51 GMT

ಬೆಂಗಳೂರು, ನ.7: ಚೈನ್ ಲಿಂಕ್ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ.20ರಷ್ಟು ಲಾಭ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂ. ವಂಚನೆಗೆ ಮುಂದಾಗಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪೊಮೋ ಎಕ್ಸ್ ಕಂಪೆನಿಯ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರ ಪೊಮೋಎಕ್ಸ್ ಕಂಪೆನಿಯಲ್ಲಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಿ ಬೇಗ ಶ್ರೀಮಂತರಾಗಬಹುದು ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು. ಇತ್ತೀಚಿಗೆ ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ಸಭೆ ನಡೆಸಿ ಸಾರ್ವಜನಿಕರಿಗೆ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಒಬ್ಬ ವ್ಯಕ್ತಿ 100 ಡಾಲರ್ ಹೂಡಿಕೆ ಮಾಡಿಸಿದರೆ ಶೇ.50 ರಷ್ಟು ಪ್ಯಾಕೇಜ್ ವ್ಯಾಲ್ಯೂ ಮೇಲೆ ಶೇ.10 ರಷ್ಟು ಲಾಭ, 300 ಡಾಲರ್ ಹೂಡಿಕೆ ಮಾಡಿದರೆ ಶೇ.11, 500 ಡಾಲರ್ ಹೂಡಿದರೆ ಶೇ.12, ಒಂದು ಸಾವಿರ ಡಾಲರ್ ಹೂಡಿಕೆದರೆ ಶೇ.13, ಐದು ಸಾವಿರ ಡಾಲರ್ ಹೂಡಿಕೆದರೆ ಶೇ14 ಹಾಗೂ 10000 ಡಾಲರ್ ಹೂಡಿಕೆದರೆ ಶೇ.15 ರಷ್ಟು ಲಾಭ ಕೊಡುವ ಆಮಿಷ ಒಡ್ಡಿ ಸಾರ್ವಜನಿಕರನ್ನು ವಂಚಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇನ್ನು, ಪೊಮೋ ಎಕ್ಸ್ ಕಂಪೆನಿ ಅಮೆರಿಕಾ, ಸಿಂಗಾಪೂರ್, ಚೈನಾ ದೇಶಗಳಲ್ಲೂ ಕಚೇರಿ ಹೊಂದಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News