ಬೆಂಗಳೂರು; ದೀಪಾವಳಿ ಪಟಾಕಿ ಸಿಡಿದು 55ಕ್ಕೂ ಅಧಿಕ ಮಂದಿಗೆ ಗಾಯ
ಬೆಂಗಳೂರು, ನ. 7: ದೀಪಾವಳಿ ಹಬ್ಬದ ಸಂಭ್ರಮ ಮುಗಿದರೂ ನಗರದಲ್ಲಿ ಪಟಾಕಿ ಅವಘಡಗಳು ಮುಂದುವರಿದಿದ್ದು, ಇದುವರೆಗೂ ಬರೋಬ್ಬರಿ 55ಕ್ಕೂ ಅಧಿಕ ಮಂದಿಯ ಕಣ್ಣಿಗೆ ಹಾನಿಯಾಗಿದ್ದು, ಈ ಪೈಕಿ 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಗರದ ಮಿಂಟೊ, ನಾರಾಯಣ ನೇತ್ರಾಲಯ, ಶೇಖರ್ ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ಗಾಯಗೊಂಡು ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಟಾಕಿಯಿಂದ ಸಂಭವಿಸುವ ಅವಘಡದ ಬಗ್ಗೆ ವೈದ್ಯರು ಹಾಗೂ ಸರಕಾರೇತರ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ 25, ನಾರಾಯಣ ನೇತ್ರಾಲಯದಲ್ಲಿ 15, ಪ್ರಕರಣಗಳು ವರದಿಯಾಗಿವೆ.
ಪ್ರಮುಖವಾಗಿ ಕಣ್ಣಿಗೆ ಹಾನಿ ಉಂಟಾದವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. 20 ಮಂದಿ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದೇ ರೀತಿ, ವಿಕ್ಟೋರಿಯಾದ ಮಹಾಬೋಧಿ ಸುಟ್ಟಗಾಯಗಳ ಕೇಂದ್ರದಲ್ಲಿ 10 ಮಂದಿ ಪ್ರಕರಣಗಳು ವರದಿಯಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಪಟಾಕಿ ಹಚ್ಚುವಾಗ, ವೀಕ್ಷಿಸುವಾಗಲೂ ಕೆಲವರು ಗಾಯಗೊಂಡಿದ್ದಾರೆ. ಪಟಾಕಿಯ ಬೆಂಕಿಯ ಉಷ್ಣದಿಂದ ಮುಖ ಹಾಗೂ ರೆಪ್ಪೆಗಳು ಸುಟ್ಟಿರುವ ಪ್ರಕರಣಗಳೂ ವರದಿಯಾಗಿವೆ ಎಂದು ತಿಳಿಸಿದರು.