×
Ad

ನಾಳೆಯಿಂದ ಬೆಂಗಳೂರಿನಲ್ಲಿ ಶಿಶುವಿಹಾರ, ಆಟದ ಮನೆಯ ಕೇಂದ್ರಗಳು ಆರಂಭ

Update: 2021-11-07 21:15 IST

ಬೆಂಗಳೂರು, ನ. 7: ಕೊವೀಡ್ ಲಾಕ್‍ಡೌನ್‍ನಿಂದಾಗಿ ಎರಡು ವರ್ಷಗಳಿಂದ ನಗರದಲ್ಲಿ ಶಿಶುವಿಹಾರ ಮತ್ತು ಆಟದ ಮನೆಯ(ಪ್ಲೆಹೋಮ್) ಕೇಂದ್ರಗಳು ಮುಚ್ಚಿದ್ದವು. ಅಕ್ಟೋಬರ್ 21ರಿಂದ 2 ಗಂಟೆಗಳ ಕಾಲ ಶಿಶುವಿಹಾರ ಮತ್ತು ಆಟದ ಮನೆಯ ಕೇಂದ್ರಗಳನ್ನು ತೆರಯಲು ಅನುಮತಿ ನೀಡಲಾಗಿತ್ತು. ನಾಳೆಯಿಂದ(ನ.8) ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಶುವಿಹಾರ ಮತ್ತು ಆಟದ ಮನೆಯ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ.

ಈ ಕುರಿತು ರವಿವಾರ ಸುತ್ತೋಲೆ ಹೊರಡಿಸಿದ್ದು, ಶಿಶುವಿಹಾರ ಮತ್ತು ಆಟದ ಮನೆಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಅಲ್ಲದೆ, 72 ಗಂಟೆಗಳ ಒಳಗಾಗಿ ಕೊವೀಡ್ ಪರೀಕ್ಷೆ ಮಾಡಿಸಿ, ನೆಗೆಟೀವ್ ರಿಪೋರ್ಟ್ ಅನ್ನು ಪಡೆದಿರಬೇಕು. ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಆಹಾರ ತಯಾರಿಸುವವರು ಹೆಡ್‍ಕ್ಯಾಪ್ ಮತ್ತು ಏಫ್ರನ್ ಬಳಸುವುದು ಕಡ್ಡಾಯ ಎಂದು ಸೂಚಿಸಿದೆ.

ಶಿಶುವಿಹಾರ ಮತ್ತು ಆಟದ ಮನೆಯ ಕೇಂದ್ರಗಳನ್ನು ಸೋಪಿನ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಅಲ್ಲಿರುವ ಪಾತ್ರೆ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ಮಕ್ಕಳಿಗೆ ಪ್ರತಿ 30 ನಿಮಿಷಗಳಿಗೊಮ್ಮೆ ಕೈಗಳನ್ನು ತೊಳೆಸಬೇಕು. ಹಿರಿಯ ನಾಗರಿಕರು ಶಿಶುವಿಹಾರ ಕೇಂದ್ರಗಳಿಗೆ ಬಾರದಂತೆ ನೋಡಿಕೊಳ್ಳಬೇಕು. ಎಲ್ಲಾ ಮಕ್ಕಳ ಅದರಲ್ಲೂ ಬೇರೆ ಪ್ರದೇಶದಿಂದ ವಲಸೆ ಬಂದ ಮಕ್ಕಳನ್ನು ಯಾವುದೇ ವಿಳಾಸ ದಾಖಲೆಗಳನ್ನು ಕೊಡುವಂತೆ ಪೀಡಿಸದೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಪೌಷ್ಠಕ ಆಹಾರದೊಂದಿಗೆ ಎಲ್ಲಾ ಅಗತ್ಯ ಸೇವೆಯನ್ನು ಪೂರೈಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News