ಬಿಟ್ ಕಾಯಿನ್ ಪ್ರಕರಣ: ಆರೋಪಿ ಹ್ಯಾಕರ್ ಶ್ರೀಕೃಷ್ಣಗೆ ನ್ಯಾಯಾಂಗ ಬಂಧನ, ವಿಷ್ಣು ಭಟ್ ಪೊಲೀಸ್ ವಶ
ಬೆಂಗಳೂರು, ನ.8: ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಬಿಟ್ ಕಾಯಿನ್ ಪ್ರಕರಣದ ರೂವಾರಿ ಶ್ರೀಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ಇದೇ ಪ್ರಕರಣದಲ್ಲಿ ಚಿನ್ನಾಭರಣ ಮಳಿಗೆಯೊಂದರ ಮಾಲಕನ ಪುತ್ರ ವಿಷ್ಣು ಭಟ್‍ನನ್ನು 4 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ಇಲ್ಲಿನ ಜೀವನ್‍ಭೀಮಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಸೋಮವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಿಷ್ಣು ಭಟ್‍ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಈ ಮನವಿ ಪರಿಗಣಿಸಿದ ನ್ಯಾಯಾಧೀಶರು, ನ.11ರವರೆಗೆ ವಿಷ್ಣು ಭಟ್‍ನನ್ನು ಪೊಲೀಸ್ ಕಸ್ಟಡಿಗೆ ಅನುಮತಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಮತ್ತೋರ್ವ ಆರೋಪಿ ಶ್ರೀಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚಿಗೆ ಜೀವನ್‍ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್‍ನಲ್ಲಿ ಶ್ರೀಕೃಷ್ಣ ಹಾಗೂ ವಿಷ್ಣು ಭಟ್ ಇಬ್ಬರು ತಂಗಿರುವಾಗ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಮಾದಕವಸ್ತು ಸೇವಿಸಿರುವುದು ದೃಢವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಡ್ರಗ್ಸ್ ಸೇವನೆ ದೃಢವಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಮನೆಗಳ ಮೇಲೆ ರವಿವಾರ ಸಂಜೆ ದಾಳಿ ನಡೆಸಿ, ವಿಷ್ಣು ಮನೆಯಲ್ಲಿ ಅಲ್ಪ್ರಜೋಲಂ ಹೆಸರಿನ ಮಾದಕ ವಸ್ತು ತುಂಬಿರುವ ಐದು ಸಿಗರೇಟುಗಳು ಹಾಗೂ ಅಲ್ಪ್ರಜೋಲಂ ಪುಡಿ ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.