ಬೆಂಗಳೂರು: ಅಪ್ರಾಪ್ತ ವಯಸ್ಸಿನ ಸಹೋದರಿಯರು ನಾಪತ್ತೆ ; ಪ್ರಕರಣ ದಾಖಲು
ಬೆಂಗಳೂರು, ನ.8: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರು ಏಕಾಏಕಿ ಕಾಣೆಯಾಗಿರುವ ಪ್ರಕರಣ ಇಲ್ಲಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಪತ್ತೆ ಮಾಡಿಕೊಡುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇಲ್ಲಿನ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬೇದಾರ್ ಪಾಳ್ಯದ ಕಾಳಿಯಮ್ಮ ದೇವಾಲಯ ಸಮೀಪದ ನೆಲೆಸಿರುವ ಝವೀದ್ ಪಾಷಾ ಅವರ ಪುತ್ರಿ ಉಮೇಹನಿ(14) ಹಾಗೂ ಇವರ ಸಹೋದರಿಯ ಪುತ್ರಿ ಫೌಝೀಯಾ ಬೇಗಂ (13) ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ನ.4 ರಂದು ಸಂಜೆ 6.30 ಸುಮಾರಿಗೆ ಸುಬೇದಾರ್ ಪಾಳ್ಯದ ಕಾಳಿಯಮ್ಮ ದೇವಾಲಯ ಸಮೀಪದ ಅಂಗಡಿಯೊಂದಕ್ಕೆ ಸಿಹಿ ತಿಂಡಿ ಖರೀದಿ ಮಾಡಲು ಈ ಇಬ್ಬರು ಬಾಲಕಿಯರು ತೆರಳಿದ್ದಾರೆ. ಆದರೆ, ಬಹುತೇಕ ಸಮಯವಾದರೂ ಮನೆಗೆ ವಾಪಸ್ಸು ಬಂದಿರಲಿಲ್ಲ.
ಇದರಿಂದ ಗಾಬರಿಗೊಂಡ ಝವೀದ್ ಪಾಷಾ ಅವರ ಸಹೋದರಿ, ತನ್ನ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಝವೀದ್ ಅವರು ಸಿಟಿ ಮಾರುಕಟ್ಟೆ ಅಂಗಡಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದು, ಸುದ್ದಿ ತಿಳಿದು ಮನೆಗೆ ಬಂದು ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಕಾಣದೆ ಇದ್ದ ಸಂದರ್ಭದಲ್ಲಿ ಇಲ್ಲಿನ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.