×
Ad

ಕರ್ತವ್ಯಲೋಪ: ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು

Update: 2021-11-09 18:53 IST

ಬೆಂಗಳೂರು, ನ.9: ಬಿಬಿಎಂಪಿ ಪೂರ್ವ ವಲಯದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಜಿ. ನಾಗರಾಜು ಮತ್ತು ಪೂರ್ವ ವಲಯದಲ್ಲಿ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮಾನಂದಕುಮಾರ್ ಆರ್.ಜಿ. ಅವರನ್ನು ಅಮಾನತ್ತುಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.  

ಎಂ.ಜಿ. ನಾಗರಾಜು ಪೂರ್ವ ವಲಯದಲ್ಲಿ ರಸ್ತೆಗುಂಡಿಗಳನ್ನು ಅವಧಿಯೊಳಗೆ ಮುಚ್ಚದೇ ಕರ್ತವ್ಯಲೋಪವೆಸಗಿದ್ದಾರೆ. ಇದರಿಂದ ಬಿಬಿಎಂಪಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದುದರಿಂದ ಅವರನ್ನು ಅಮಾನತುಗೊಳಿಸಿ ಬಿಬಿಎಂಪಿ ವಿಶೇಷ ಆಯುಕ್ತ ಆದೇಶ ಹೊರಡಿಸಿದ್ದಾರೆ.

ಪ್ರೇಮಾನಂದಕುಮಾರ್ ಆರ್.ಜಿ. ಲೋಕೋಪಯೋಗಿ ಇಲಾಖೆಗೆ ನೇಮಕವಾಗಿದ್ದು, ಬಿಬಿಎಂಪಿಗೆ ಎರವಲು ಸೇವೆಯ ಮೇಲೆ ತೆಗೆದುಕೊಳ್ಳಲಾಗಿತ್ತು. ಅವರು ಕಳೆದ ತಿಂಗಳು ಅನಧಿಕೃತವಾಗಿ ಕಚೇರಿಗೆ ಗೈರಾಗಿದ್ದರು. ಅವರು ಗೈರಾದ್ದರಿಂದ ಬಿಬಿಎಂಪಿ ಕಾಮಗಾರಿಗಳು ಸೂಕ್ತ ಸಮಯದಲ್ಲಿ ನಿರ್ವಹಿಸಿಲ್ಲ. ಇದರಿಂದ ಕಳೆದ ತಿಂಗಳು ನಗರದಲ್ಲಿ ಸುರಿದ ಮಳೆಯಿಂದ ಹೆಚ್ಚು ಅವಾಂತರಗಳು ಸೃಷ್ಟಿಯಾಗಿವೆ. ಆದುದರಿಂದ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News