×
Ad

ಪುನೀತ್‌ ರಾಜ್‌ ಕುಮಾರ್‌ ಕುಟುಂಬದಿಂದ ಅನ್ನ ಸಂತರ್ಪಣೆ: ಹರಿದು ಬಂದ ಜನಸಾಗರ

Update: 2021-11-09 19:24 IST

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 12 ದಿನ ಹಿನ್ನೆಲೆ ಡಾ.ರಾಜ್‌ಕುಮಾರ್ ಕುಟುಂಬಸ್ಥರು ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು.

ಮಂಗಳವಾರ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಮೈದಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪುನೀತ್ ಅವರ ಪತ್ನಿ ಅಶ್ವಿನಿ, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಆರಂಭದಲ್ಲಿ ಊಟ ಬಡಿಸಿದರು. ಬಳಿಕ ಶಿವರಾಜ್‌ ಕುಮಾರ್ ಅವರು ರಕ್ತದಾನ ಮಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್, ಪುನೀತ್ ಅಗಲಿಕೆಯ ನೋವಿನಲ್ಲೇ ಅಭಿಮಾನಿಗಳು ಊಟ ಮಾಡುತ್ತಿದ್ದಾರೆ. ಇಂತಹ ಸಂದರ್ಭ ಬಂದು ಊಟ ಹಾಕುವುದು ಅಂದರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಅಪ್ಪು ಬದುಕಿದ್ದಾಗಲೇ ಊಟ ಹಾಕಬೇಕಿತ್ತು ಎಂಬುದು ಅವನ ಆಸೆಯಾಗಿತ್ತು, ಆದರೆ ಅಪ್ಪು ಬೇಗ ಹೋಗಿಬಿಟ್ಟ ಎಂದು ಭಾವುಕರಾದರು.

ಅಭಿಮಾನಿಗಳೇ ನಮಗೆ ದೇವರು. ಅವರು ಕೊಟ್ಟದ್ದನ್ನು ಅವರಿಗೇ ನೀಡುತ್ತಿದ್ದೇವೆ ಅಷ್ಟೆ. ಪುನೀತ್ ಮಾಡುತ್ತಿದ್ದ ಸಾಮಾಜಿಕ ಸೇವೆಗಳ ಬಗ್ಗೆ ಯಾವುದೂ ನಮ್ಮ ಕುಟುಂಬಕ್ಕೆ ಗೊತ್ತಿರಲಿಲ್ಲ. ಇಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ನುಡಿದರು.

ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು. ಅಪ್ಪು ಅವರಿಗೆ ಪ್ರಿಯವಾದ ಖಾದ್ಯಗಳನ್ನೇ ಅಭಿಮಾನಿಗಳಿಗೆ ಬಡಿಸಲಾಯಿತು. ಸಸ್ಯಾಹಾರ, ಮಾಂಸಾಹಾರ ಊಟದ ಎರಡು ವಿಭಾಗಗಳ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಭದ್ರತೆ: ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬ್ಯಾರಿಕೇಡ್ ಅಳವಡಿಸಿ, ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಸ್ಟಾಲಿನ್ ಪುತ್ರ ಭೇಟಿ
ಪುನೀತ್ ರಾಜ್‌ಕುಮಾರ್ ಸಮಾಧಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯ್‌ನಿಧಿ ಸ್ಟಾಲಿನ್ ಭೇಟಿ ನೀಡಿ, ಪುಪ್ಪ ನಮನ ಸಲ್ಲಿಸಿದರು. ನಂತರ ಪುನೀತ್ ನಿವಾಸಕ್ಕೆ ತೆರಳಿ, ಸಾಂತ್ವನ ಹೇಳಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರ ನಿಧನದಿಂದ ತುಂಬಾ ನೋವಾಗಿದೆ. ಈ ಸೇವೆ, ನಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನುಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News