ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ಗೆ ಸೆಂಟ್ರಲ್ ವಕ್ಫ್ ಕೌನ್ಸಿಲ್ ನಿಯೋಗ ಭೇಟಿ
ಬೆಂಗಳೂರು, ನ.10: ಹೊಸದಿಲ್ಲಿಯ ಸೆಂಟ್ರಲ್ ವಕ್ಫ್ ಕೌನ್ಸಿಲ್‍ನ ನಿಯೋಗವು ಬುಧವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಮತ್ತು ಹಝ್ರತ್ ಮುಹೀಬ್ ಶಾ ಖಾದ್ರಿ ದರ್ಗಾ ಕಾಂಪ್ಲೆಕ್ಸ್‍ಗೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ದರ್ಗಾ ಆಡಳಿತ ಸಮಿತಿ ಅಡಿಯಲ್ಲಿ ನಡೆಸಲಾಗುತ್ತಿರುವ ಐಟಿಐ ಸಂಸ್ಥೆ, ಉಚಿತ ಡಯಾಲಿಸಿಸ್ ಕೇಂದ್ರ, ಆರೋಗ್ಯ ಕೇಂದ್ರ, ಉದ್ಯಾನವನ, ಮಹಿಳೆಯರ ಹಾಸ್ಟೆಲ್ ಹಾಗೂ ಉದ್ದೇಶಿತ ರಕ್ತ ನಿಧಿ(ಬ್ಲಡ್ ಬ್ಯಾಂಕ್) ಅನ್ನು ವೀಕ್ಷಿಸಿದ ಸೆಂಟ್ರಲ್ ವಕ್ಫ್ ಕೌನ್ಸಿಲ್ ನಿಯೋಗವು, ವಕ್ಫ್ ಸಂಸ್ಥೆಗಳ ಅಡಿಯಲ್ಲಿ ಒಂದೇ ಸೂರಿನಡಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಕೈಗೊಂಡಿರುವುದು ಇಡೀ ದೇಶಕ್ಕೆ ಮಾದರಿ ಎಂದು ಹರ್ಷ ವ್ಯಕ್ತಪಡಿಸಿತು.
ಅಲ್ಲದೆ, ದರ್ಗಾ ಆವರಣದಲ್ಲಿ ಲಭ್ಯವಿರುವ ಜಾಗದಲ್ಲಿ ಉದ್ದೇಶಿತ ಬಹುಮಹಡಿ ಹೈ ಟೆಕ್ ಕಾರ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿಗೆ ಸೆಂಟ್ರಲ್ ವಕ್ಫ್ ಕೌನ್ಸಿಲ್ ವತಿಯಿಂದ ಅಗತ್ಯ ನೆರವು ನೀಡುವುದಾಗಿಯೂ ನಿಯೋಗ ಭರವಸೆ ನೀಡಿತು.
ಈ ಸಂದರ್ಭದಲ್ಲಿ ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ, ಕಾರ್ಯದರ್ಶಿ ಸೈಯದ್ ಮುನವರ್, ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಯೂಸುಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.