×
Ad

ವಕ್ಫ್ ಆಸ್ತಿ ಲಪಟಾಯಿಸುವ ಮಾಫಿಯಾ ತಡೆಗಟ್ಟಲು ಮೋದಿ ಸರಕಾರ ಬದ್ಧ: ಕೇಂದ್ರ ವಕ್ಫ್ ಮಂಡಳಿ

Update: 2021-11-10 21:07 IST

ಬೆಂಗಳೂರು, ನ.10: ದೇಶದೆಲ್ಲೆಡೆ ವಕ್ಫ್ ಆಸ್ತಿಗಳನ್ನು ಲಪಟಾಯಿಸುವ ಮಾಫಿಯಾ ತಲೆ ಎತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ವಕ್ಫ್ ಮಂಡಳಿ ಸದಸ್ಯರು ಜಂಟಿ ಹೇಳಿಕೆ ಬಿಡುಗಡೆ ಮಾಡಿದರು.

ಬುಧವಾರ ಬೆಂಗಳೂರಿನ ರಾಜ್ಯ ವಕ್ಫ್ ಕಚೇರಿಗೆ ಭೇಟಿ ನೀಡಿದ ಕೇಂದ್ರ ವಕ್ಫ್ ಮಂಡಳಿ ಸದಸ್ಯರು, ಕರ್ನಾಟಕ ವಕ್ಫ್ ಮಂಡಳಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ವಕ್ಫ್ ಮಂಡಳಿಯ ಪ್ರಮುಖ ಸದಸ್ಯ ಟಿ.ಒ.ನೌಶದ್ ಮಾತನಾಡಿ, ದೇಶವ್ಯಾಪಿ ವಕ್ಫ್ ಮಂಡಳಿಯ ಆಸ್ತಿ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಆಸ್ತಿಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ವಕ್ಫ್ ಸ್ವತ್ತುಗಳ ರಕ್ಷಣೆ ಹಾಗೂ ಧಾರ್ಮಿಕ ಕಾರ್ಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇನ್ನುಮುಂದೆ ವಕ್ಫ್ ಆಸ್ತಿ ಕಬಳಿಕೆ ಅಥವಾ ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಜಾಮೀನು ರಹಿತ ವಾರೆಂಟ್ ಹೊರಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸದಸ್ಯೆ ಎಸ್.ಮುನ್ವಾರಿ ಬೇಗಂ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯವಾರು ಸಮೀಕ್ಷೆ ನಡೆಸಲಾಗಿದ್ದು, ಇದರ ಮಾಹಿತಿಯಂತೆ ಆಯಾ ಪ್ರಮುಖ ನಗರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು. ಇದಕ್ಕಾಗಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಮೊದಲ ಬಾರಿಗೆ ಮುಂದಿನ ತಿಂಗಳು ಕೇರಳದಲ್ಲಿ ಒಂದು ತರಬೇತಿ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಇದರಿಂದ ದಕ್ಷಿಣ ಭಾರತ ಹಲವು ಪರೀಕ್ಷಾ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸದಸ್ಯರಾದ ಹನೀಫ್ ಅಲಿ, ವಸೀಮ್ ಆರ್.ಕೆ., ಡಾ.ಡಿ.ಅಂದ್ರಾಬಿ, ಮುಹಮ್ಮದ್ ಹರೋನ್, ಆರ್.ಕೆ.ಪಠಾಣ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News