×
Ad

ಬೆಂಗಳೂರು: ಫ್ಲೈಓವರ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಹಾಲು ಸಾಗಾಟದ ವಾಹನ ಢಿಕ್ಕಿ; ಇಬ್ಬರು ಮೃತ್ಯು

Update: 2021-11-13 12:02 IST

ಬೆಂಗಳೂರು, ನ.13: ಐವರು ಸ್ನೇಹಿತರು ಫ್ಲೈ ಓವರ್ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಂಭವಿಸಿದ ವಾಹನ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ತಾವರೆಕೆರೆ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲತಃ ವೈಟ್ ಫೀಲ್ಡ್ ನ ನಿವಾಸಿಗಳಾದ ದಿನೇಶ್(25) ಹಾಗೂ ವಿನಯ್ (25) ಮೃತಪಟ್ಟವರಾಗಿದ್ದಾರೆ. ಗಾಯಾಳುಗಳ ಪೈಕಿ ಅಂಕಿತ್ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದರೆ, ಜನಾರ್ದನ್ ಹಾಗೂ ಜಾಸ್ಮಿನ್ ಎಂಬವರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ನಿನ್ನೆ ತಡರಾತ್ರಿ ದಿನೇಶ್, ವಿನಯ್ ಸಹಿತ ಐವರು ಸ್ನೇಹಿತರು ತಾವರೆಕೆರೆಯ ಪ್ಲೈಓವರ್ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದೇವೇಳೆ ಹಿಂಬದಿಯಿಂದ ಅತೀ ವೇಗದಿಂದ ಬಂದಂತಹ ಹಾಲಿನ ವಾಹನ ಚಾಲಕನ ನಿಯಂತ್ರಣಕ್ಕೆ ಸಿಗದೆ ಇವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ಹಾಲು ಸಾಗಾಟ ವಾಹನವನ್ನು ತೊರೆದು ಅದರ ಚಾಲಕ ಪರಾರಿಯಾಗಿದ್ದಾನೆ.

ಈ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News