×
Ad

2020-21ನೇ ಸಾಲಿನಲ್ಲಿ ಶೇ.85ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಿರಿ: ಖಾಸಗಿ ಶಾಲೆಗಳಿಗೆ ಸರಕಾರ ಆದೇಶ

Update: 2021-11-13 13:29 IST

ಬೆಂಗಳೂರು, ನ.13: ಖಾಸಗಿ ಶಾಲೆಗಳು 2020-21ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಪೂರ್ಣ ಪ್ರಮಾಣದ ಬೋಧನಾ ಶುಲ್ಕ ಪಡೆದಿದ್ದರೆ, ಅದರಲ್ಲಿ ಶೇ.85ರಷ್ಟು ಉಳಿಸಿಕೊಂಡು, ಉಳಿದ ಶೇ.15ರಷ್ಟು ಶುಲ್ಕವನ್ನು ಹಿಂದಿರುಗಿಸಬೇಕು ಎಂದು ರಾಜ್ಯ ಸರಕಾರ ಶುಕ್ರವಾರ ಆದೇಶ ನೀಡಿದೆ. ಅಲ್ಲದೆ, ಶಾಲಾಭಿವೃದ್ಧಿ ಶುಲ್ಕ ಸೇರಿದಂತೆ ಇತರ ಶುಲ್ಕಗಳು, ಟ್ರಸ್ಟ್‌ ಅಥವಾ ಸೊಸೈಟಿಗೆ ದೇಣಿಗೆ ಸ್ವೀಕರಿಸಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸರಕಾರ ಸೂಚಿಸಿದೆ.

ಹೆಚ್ಚುವರಿ ಶುಲ್ಕವನ್ನು 2021–22ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಒಂದೊಮ್ಮೆ ನಿಗದಿಪಡಿಸಿದ ಶುಲ್ಕಕ್ಕಿಂತ(ಶೇ.85ಕ್ಕಿಂತ ಹೆಚ್ಚು)ಕ್ಕಿಂತಲೂ ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಛಿಸಿದರೆ ಅದಕ್ಕೂ ಅವಕಾಶವಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

2020-21ನೇ ಸಾಲಿನ ಶೇ.30ರಷ್ಟು ಬೋಧನಾ ಶುಲ್ಕವನ್ನು ಕಡಿತ ಮಾಡುವಂತೆ 2021ರ ಜ. 29ರಂದು ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಸೆ.16ರಂದು ತೀರ್ಪು ನೀಡಿದ್ದು, ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ ಮಾಡುವಂತೆ ಆದೇಶಿಸಿತ್ತು. ಆದರೆ, ಅನೇಕ ಶಿಕ್ಷಣ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ, ಸರಕಾರ ಈ ಬಗ್ಗೆ ಇದೀಗ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News